ADVERTISEMENT

ರಾಜ್ಯದಲ್ಲೂ ‘ನೀಟ್‌’ ಯಶಸ್ವಿ: ಸುಗಮವಾಗಿ ನಡೆದ ಪರೀಕ್ಷೆ

ಪಿಟಿಐ
Published 13 ಸೆಪ್ಟೆಂಬರ್ 2020, 19:04 IST
Last Updated 13 ಸೆಪ್ಟೆಂಬರ್ 2020, 19:04 IST
‘ನೀಟ್‌’ ಪರೀಕ್ಷೆಯ ನಂತರ ದೆಹಲಿ ಹೊರವಲಯದ ಗುರುಗ್ರಾಮ್‌ನ ಪರೀಕ್ಷಾ ಕೇಂದ್ರದ ಹೊರಗಡೆ ಕಂಡು ಬಂದ ಚಿತ್ರಣವಿದು
‘ನೀಟ್‌’ ಪರೀಕ್ಷೆಯ ನಂತರ ದೆಹಲಿ ಹೊರವಲಯದ ಗುರುಗ್ರಾಮ್‌ನ ಪರೀಕ್ಷಾ ಕೇಂದ್ರದ ಹೊರಗಡೆ ಕಂಡು ಬಂದ ಚಿತ್ರಣವಿದು   

ನವದೆಹಲಿ: ವೈದ್ಯಕೀಯ ಕೋರ್ಸ್‌ ಪ್ರವೇಶ ಸಂಬಂಧ ದೇಶದಾದ್ಯಂತ ಭಾನುವಾರ 3,800 ಕೇಂದ್ರಗಳಲ್ಲಿ ‘ನೀಟ್‌’ ಪರೀಕ್ಷೆ ಸುಗಮವಾಗಿ ನಡೆಯಿತು. ಕೋವಿಡ್‌ 19ರ ಕಾರಣದಿಂದ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು.

ಪರಸ್ಪರ ಅಂತರ ಕಾಯ್ದುಕೊಳ್ಳಲು ಒತ್ತು ನೀಡಿದ್ದ ವಿದ್ಯಾರ್ಥಿಗಳು ಮುಂಜಾಗ್ರತೆಯಾಗಿ ಮಾಸ್ಕ್ ಧರಿಸಿದ್ದರು. ಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಪ್ರವೇಶವನ್ನು ಬೆಳಿಗ್ಗೆ 11ರಿಂದಲೇ ನೀಡಲಾಯಿತು.

ವಿದ್ಯಾರ್ಥಿಗಳಿಗೆ ಕೇಂದ್ರ ಪ್ರವೇಶಿಸಲು ಪ್ರತ್ಯೇಕ ಸಮಯ ನಿಗದಿಪಡಿಸಲಾಗಿತ್ತು. ಆದರೂ, ಪ್ರವೇಶ ಮತ್ತು ನಿರ್ಗಮನದ ವೇಳೆ ಅಂತರ ಕಾಯ್ದುಕೊಳ್ಳದಿದ್ದುದು ಅಲ್ಲಲ್ಲಿ ಕಂಡುಬಂತು.

ADVERTISEMENT

ದೇಶದಾದ್ಯಂತ ಸುಮಾರು 15 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. ಈ ಮೊದಲು ಎರಡು ಬಾರಿ ಪರೀಕ್ಷೆಯನ್ನು ಮುಂದೂಡಲಾಗಿತ್ತು.

ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪರೀಕ್ಷಾ ಒತ್ತಡವೇ ಕಾರಣ–ಡಿಎಂಕೆ:

ನೀಟ್‌ ಪರೀಕ್ಷೆ ಹಿಂದಿನ ದಿನ ತಮಿಳುನಾಡಿನಲ್ಲಿ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಪರೀಕ್ಷಾ ಒತ್ತಡವೇ ಕಾರಣ ಎಂದು ಆರೋಪಿಸಿರುವ ವಿರೋಧಪಕ್ಷಗಳು ನೀಟ್ ರದ್ದುಪಡಿಸಬೇಕು ಎಂಬ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿವೆ. ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್, ‘ನೀಟ್, ಪರೀಕ್ಷೆಯೇ ಅಲ್ಲ’ ಎಂದಿದ್ದಾರೆ.

ರಾಜ್ಯದಲ್ಲೂ ‘ನೀಟ್‌’ ಯಶಸ್ವಿ

ಬೆಂಗಳೂರು: 2020–21ನೇ ಸಾಲಿನ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಭಾನುವಾರ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ರಾಜ್ಯದಲ್ಲೂ ಯಶಸ್ವಿಯಾಗಿ ನಡೆಯಿತು.

ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳ ಪೈಕಿ ರಾಜ್ಯದಲ್ಲಿ 1,19,597 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. ಬೆಂಗಳೂರು, ಕಲಬುರ್ಗಿ, ದಾವಣಗೆರೆ, ಧಾರವಾಡ, ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ಮೈಸೂರು ಮತ್ತು ಉಡುಪಿಯಲ್ಲಿ ಒಟ್ಟು 298 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.

ಪರೀಕ್ಷಾ ನಿಯಮದಂತೆ ವಿದ್ಯಾರ್ಥಿಗಳು ಸರಳ ಉಡುಗೆಯಲ್ಲಿ ಹಾಜರಾದರು. ಕಿವಿಯೋಲೆ ಧರಿಸಿಕೊಂಡು ಬಂದಿದ್ದ ವಿದ್ಯಾರ್ಥಿನಿಯರು ಕೊನೆಕ್ಷಣದಲ್ಲಿ ಓಲೆಗಳನ್ನು ಕಳಚಿಟ್ಟು ಪರೀಕ್ಷೆಗೆ ಹಾಜರಾಗಬೇಕಾಯಿತು. ಕೆಲವು ವಿದ್ಯಾರ್ಥಿಗಳು ಟೀ ಶರ್ಟ್ ಹಾಗೂ ಶಾರ್ಟ್ಸ್‌ ಗಳಲ್ಲಿಯೇ ಬಂದು ಪರೀಕ್ಷೆ ಬರೆದರು.

ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯವರೆಗೆ ಪರೀಕ್ಷೆ ನಿಗದಿಯಾಗಿದ್ದರೂ, ಬೆಳಿಗ್ಗೆ 11 ಗಂಟೆಗೆ ವಿದ್ಯಾರ್ಥಿಗಳು ತಮ್ಮ ಪೋಷಕರ ಜೊತೆ ಕೇಂದ್ರದ ಬಳಿ ಹಾಜರಿದ್ದರು. ಕೋವಿಡ್‌ ಕಾರಣಕ್ಕೆ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಮತ್ತು ಪರೀಕ್ಷಾ ಸಿಬ್ಬಂದಿಯನ್ನು ಥರ್ಮಲ್ ಸ್ಕ್ಯಾನ್ ಮಾಡಿ, ಸ್ಯಾನಿಟೈಸರ್ ನೀಡಿ ಕೇಂದ್ರಗಳ ಒಳಗೆ ಬಿಡಲಾಯಿತು.

11 ಗಂಟೆಯಿಂದ 11.30ರ ಒಳಗೆ ಕೇಂದ್ರಗಳಲ್ಲಿ ಹಾಜರಿರುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿತ್ತು. 12.30ರ ಒಳಗೆ ಎಲ್ಲರೂ ವರದಿ ಮಾಡಿಕೊಳ್ಳಲೇಬೇಕು ಎಂದೂ ಸೂಚಿಸಲಾಗಿತ್ತು.

ಸರಳವಾದ ಉಡುಪು ಧರಿಸಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಬೇಕು. ಕಾಲಿಗೆ ಚಪ್ಪಲಿ, ಸ್ಯಾಂಡಲ್ಸ್ ಹಾಗೂ ಲೋ ಹೀಲ್ಡ್ ಚಪ್ಪಲಿ ಮಾತ್ರ ಧರಿಸಿರಬೇಕು. ಶೂ ಧರಿಸುವುದು, ತುಂಬು ತೋಳಿನ ಅಂಗಿ, ಕಿವಿ ಓಲೆ, ವಾಚ್, ಬೆಲ್ಟ್‌ ನಿಷೇಧಿಸಲಾಗಿತ್ತು. ಮಾಸ್ಕ್‌ ಮತ್ತು ಕೈಗವಸು ಕಡ್ಡಾಯಗೊಳಿಸಲಾಗಿತ್ತು. ಆದರೆ, ಪಾರದರ್ಶಕ ಬಾಟಲಿಯಲ್ಲಿ ನೀರು, 50 ಮಿ. ಲೀ. ಸ್ಯಾನಿಟೈಸರ್ ತರಲು ಅವಕಾಶ ನೀಡಲಾಗಿತ್ತು.

‘ನಿಗದಿಪಡಿಸಿದ ಸಮಯಕ್ಕಿಂತ ಮೊದಲೇ ಕೇಂದ್ರಕ್ಕೆ ತಲುಪಿದ್ದರೂ ಕೋವಿಡ್‌ ಪರೀಕ್ಷೆಗಾಗಿ ಸುಮಾರು 45 ನಿಮಿಷ ಸರದಿಯಲ್ಲಿ ನಿಲ್ಲಬೇಕಾಯಿತು’ ಎಂದು ಬೆಂಗಳೂರಿನ ಕೇಂದ್ರವೊಂದರಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿ ಹೇಳಿದರು. ‘ಭೌತ ವಿಜ್ಞಾನ ಮತ್ತು ಜೀವ ವಿಜ್ಞಾನ ವಿಷಯದ ಪತ್ರಿಕೆಗಳು ಸ್ವಲ್ಪ ಕಷ್ಟವಿತ್ತು’ ಎಂದು ಕೆಲವು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.