ADVERTISEMENT

ದೇಶದ ಅಗತ್ಯ ಪರಿಗಣಿಸಿ ಎನ್‌ಇಪಿ ಜಾರಿ: ಮೋದಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2023, 11:35 IST
Last Updated 12 ಏಪ್ರಿಲ್ 2023, 11:35 IST
 ನರೇಂದ್ರ ಮೋದಿ  
 ನರೇಂದ್ರ ಮೋದಿ     

ಭೋಪಾಲ್ (ಪಿಟಿಐ): ಆಧುನಿಕ ಮತ್ತು ಅಭಿವೃದ್ಧಿ ಹೊಂದಿದ ದೇಶದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.

ಹೊಸದಾಗಿ ನೇಮಕಗೊಂಡ ಶಿಕ್ಷಕರಿಗಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮೋದಿ ಅವರು ನೀಡಿರುವ ವಿಡಿಯೊ ಸಂದೇಶದಲ್ಲಿ ಈ ವಿಷಯ ತಿಳಿಸಿದ್ದಾರೆ.

ಈ ನೀತಿಯು ಮಕ್ಕಳ ಸಮಗ್ರ ಅಭಿವೃದ್ಧಿ, ಜ್ಞಾನ, ಕೌಶಲ, ಸಂಸ್ಕೃತಿ ಮತ್ತು ಭಾರತೀಯ ಮೌಲ್ಯಗಳ ಉತ್ತೇಜನಕ್ಕೆ ಒತ್ತು ನೀಡುತ್ತದೆ ಎಂದರು.

ADVERTISEMENT

ಮಧ್ಯಪ್ರದೇಶದಲ್ಲಿ ಯುವಕರಿಗೆ ಸರ್ಕಾರಿ ಉದ್ಯೋಗ ಒದಗಿಸುವ ಅಭಿಯಾನ ವೇಗವಾಗಿ ನಡೆಯುತ್ತಿದೆ. ಜಿಲ್ಲೆಗಳಲ್ಲಿ ಉದ್ಯೋಗ ಮೇಳ ಆಯೋಜಿಸುವ ಮೂಲಕ ಸಾವಿರಾರು ಜನರನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಶಿಕ್ಷಕರ ಹುದ್ದೆಗೆ 22,400 ಕ್ಕೂ ಹೆಚ್ಚು ಯುವಕರನ್ನು ನೇಮಕ ಮಾಡಲಾಗಿದೆ. ಎನ್ಇಪಿಯ ಪರಿಣಾಮಕಾರಿ ಅನುಷ್ಠಾನದಲ್ಲಿ ಶಿಕ್ಷಕರ ಪ್ರಮುಖ ಪಾತ್ರದ ಬಗ್ಗೆ ವಿವರಿಸಿ‌ದ ಮೋದಿ, ಮಧ್ಯಪ್ರದೇಶದಲ್ಲಿ ಶಿಕ್ಷಕರ ನೇಮಕಾತಿ ಅಭಿಯಾನವು ಈ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ ಎಂದು ಹೇಳಿದರು.

ನೇಮಕಗೊಂಡಿರುವ ಸುಮಾರು ಅರ್ಧದಷ್ಟು ಶಿಕ್ಷಕರನ್ನು ಬುಡಕಟ್ಟು ಪ್ರದೇಶಗಳಲ್ಲಿ ನಿಯೋಜಿಸಲಾಗುವುದು. ಇದು ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಮೋದಿ ಮಾಹಿತಿ ನೀಡಿದರು.

ಮಧ್ಯಪ್ರದೇಶ ಸರ್ಕಾರ ಈ ವರ್ಷ 60,000 ಶಿಕ್ಷಕರು ಸೇರಿದಂತೆ ಒಂದು ಲಕ್ಷಕ್ಕೂ ಹೆಚ್ಚು ನೇಮಕಾತಿ ಮಾಡುವ ಗುರಿ ನಿಗದಿಪಡಿಸಿದೆ. ರಾಷ್ಟ್ರೀಯ ಸಾಧನೆ ಸಮೀಕ್ಷೆಯಲ್ಲಿ (ಎನ್ಎಎಸ್) ರಾಜ್ಯವು ಶಿಕ್ಷಣದ ಗುಣಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಧಾನ ಮಂತ್ರಿ ಕೌಶಲ ವಿಕಾಸ್ ಯೋಜನೆ ಅಡಿ ಯುವಕರಿಗೆ ತರಬೇತಿ ನೀಡಲು ದೇಶದಾದ್ಯಂತ ಕೌಶಲ ಅಭಿವೃದ್ಧಿ ಕೇಂದ್ರ ತೆರೆಯಲಾಗಿದೆ. ಈ ವರ್ಷದ ಬಜೆಟ್‌ನಲ್ಲಿ 30 ಕೌಶಲ ಭಾರತ ಅಂತರರಾಷ್ಟ್ರೀಯ ಕೇಂದ್ರ ತೆರೆಯಲಾಗುವುದು. ಅಲ್ಲಿ ಯುವಕರಿಗೆ ನವಯುಗ ತಂತ್ರಜ್ಞಾನದ ಮೂಲಕ ತರಬೇತಿ ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.