ADVERTISEMENT

ನೂತನ ಸಂಸತ್‌ ಭವನ ಉದ್ಘಾಟನೆ ಇಂದು

​ಪ್ರಜಾವಾಣಿ ವಾರ್ತೆ
Published 27 ಮೇ 2023, 23:45 IST
Last Updated 27 ಮೇ 2023, 23:45 IST
ನೂತನ ಸಂಸತ್‌ ಭವನದ ಒಂದು ನೋಟ (ಎಡ ಚಿತ್ರ). ಪ್ರಧಾನಿ ಮೋದಿ ಅವರಿಗೆ ತಮಿಳುನಾಡಿನ ಅಧೀನಾಮ್‌ ಮಠದ ಪ್ರತಿನಿಧಿಗಳು ಶನಿವಾರ ‘ಸೆಂಗೋಲ್‌’ ಅನ್ನು ಹಸ್ತಾಂತರಿಸಿದರು         –
ನೂತನ ಸಂಸತ್‌ ಭವನದ ಒಂದು ನೋಟ (ಎಡ ಚಿತ್ರ). ಪ್ರಧಾನಿ ಮೋದಿ ಅವರಿಗೆ ತಮಿಳುನಾಡಿನ ಅಧೀನಾಮ್‌ ಮಠದ ಪ್ರತಿನಿಧಿಗಳು ಶನಿವಾರ ‘ಸೆಂಗೋಲ್‌’ ಅನ್ನು ಹಸ್ತಾಂತರಿಸಿದರು –    ಪಿಟಿಐ ಚಿತ್ರ

ನವದೆಹಲಿ: ಹಲವು ವಿರೋಧ ಪಕ್ಷಗಳ ಪ್ರಬಲ ವಿರೋಧ ಹಾಗೂ ಬಹಿಷ್ಕಾರದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್‌ ಭವನವನ್ನು ಭಾನುವಾರ ಉದ್ಘಾಟಿಸಲಿದ್ದಾರೆ.

ಬೆಳಿಗ್ಗೆಯಿಂದಲೇ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಐತಿಹಾಸಿಕ ಮಹತ್ವ ಹೊಂದಿರುವ ‘ಸೆಂಗೋಲ್‌’ ಅನ್ನು ನೂತನ ಸಂಸತ್ತಿನಲ್ಲಿ ಪ್ರತಿಷ್ಠಾಪಿಸುವುದೂ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
‘ನೂತನ ಭವನವು ಪ್ರಜಾಪ್ರಭುತ್ವದ ದೇವಾಲಯ ಇದ್ದಂತೆ. ಇದು ಭಾರತದ ಅಭಿವೃದ್ಧಿಪಥವನ್ನು ಇನ್ನಷ್ಟು ಬಲಗೊಳಿಸುವುದು ಮತ್ತು ದೇಶದ ಕೋಟಿ ಕೋಟಿ ಜನರನ್ನು ಸಶಕ್ತಗೊಳಿಸುವುದನ್ನು ಮುಂದುವರೆಸುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಟ್ವೀಟ್‌ ಮಾಡಿದ್ದಾರೆ.

ನೂತನ ಸಂಸತ್ ಭವನದ ವಿಡಿಯೊವನ್ನು ‘ಮೈಪಾರ್ಲಿಮೆಂಟ್‌ಮೈಪ್ರೈಡ್‌’ ಹ್ಯಾಷ್‌ಟ್ಯಾಗ್‌ ಮೂಲಕ ಟ್ವಿಟರ್‌ ಖಾತೆಗಳಲ್ಲಿ ಹಂಚಿಕೊಳ್ಳುವಂತೆ ಮೋದಿ ಅವರು ಜನತೆಗೆ ಕರೆ ನೀಡಿದ್ದರು. ತಮ್ಮದೇ ಧ್ವನಿಯಲ್ಲಿ ಈ ವಿಡಿಯೊಗಳನ್ನು ಹಂಚುವಂತೆ ಅವರು ಕೋರಿದ್ದರು.

ADVERTISEMENT

ವಿರೋಧ: ಸಮಾರಂಭವನ್ನು ಬಹಿಷ್ಕರಿಸುವುದಾಗಿ ಸುಮಾರು 20 ವಿರೋಧ ಪಕ್ಷಗಳ ನಾಯಕರು ಈಗಾಗಲೇ ತಿಳಿಸಿದ್ದಾರೆ. ಬುಡಕಟ್ಟು ಸಮುದಾಯಕ್ಕೆ ಸೇರಿದ, ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೇ ಇರುವ ಕುರಿತು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‌, ಕೇಂದ್ರದ ವಿರುದ್ಧ ಟೀಕಾಪ್ರಹಾರ ನಡೆಸಿದೆ. ‘ರಾಷ್ಟ್ರಪತಿಯನ್ನು ಆಹ್ವಾನಿಸದೇ, ಅವರನ್ನು ಮೂಲೆ ಗುಂಪು ಮಾಡಿದ್ದು ‘ಪ್ರಜಾಪ್ರಭುತ್ವಕ್ಕೆ ಎಸಗಿದ ಘೋರ ಅಪಮಾನ’ ಎಂದು ಕಾಂಗ್ರೆಸ್‌ ಹೇಳಿದೆ.

ದೇಶಕ್ಕೆ ಕಾರಣ ನೀಡಿ: ಕಮಲ್‌ ಹಾಸನ್‌ ಆಗ್ರಹ

‘ನಾನು ಪ್ರಧಾನಿಗೆ ಒಂದು ಸರಳ ಪ್ರಶ್ನೆ ಕೇಳುತ್ತೇನೆ, ‘ನೂತನ ಸಂಸತ್‌ ಭವನದ ಉದ್ಘಾಟನೆಗೆ ಭಾರತದ ರಾಷ್ಟ್ರಪತಿ ಏಕೆ ಭಾಗವಹಿಸಬಾರದು ಎಂಬುದನ್ನು ದೇಶಕ್ಕೆ ತಿಳಿಸಿ’ ಎಂದು ಮಕ್ಕಳ್‌ ನಿದಿ ಮಯ್ಯಂ ಮುಖ್ಯಸ್ಥ, ನಟ ಕಮಲ್‌ ಹಾಸನ್‌ ಅವರು ‍ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

‘ಇಂಥ ಐತಿಹಾಸಿಕ ಘಳಿಗೆಯಲ್ಲಿ ದೇಶದ ಮುಖ್ಯಸ್ಥರಾಗಿ ರಾಷ್ಟ್ರಪತಿ ಅವರು  ಕಾರ್ಯಕ್ರಮದಲ್ಲಿ ಏಕೆ ಭಾಗವಹಿಸಬಾರದು ಎಂಬ ಬಗ್ಗೆ ಕಾರಣಗಳೂ ತೋಚುತ್ತಿಲ್ಲ’ ಎಂದರು.

‘ರಾಷ್ಟ್ರಪತಿ ಅವರನ್ನು ಆಹ್ವಾನಿಸದೇ ಇರುವ ಬಗ್ಗೆ ತಕರಾರು ಇದ್ದರೂ ರಾಷ್ಟ್ರದ ಹಿತದೃಷ್ಟಿಯಿಂದ ಇಡೀ ದೇಶವೇ ಸಂಭ್ರಮಿಸುವ ಈ ಘಳಿಗೆಯಲ್ಲಿ ಪಾಲ್ಗೊಳ್ಳುತ್ತೇನೆ’ ಎಂದೂ ಕಮಲ್‌ ಹಾಸನ್‌ ಅವರು ಹೇಳಿದ್ದಾರೆ.

ಕೇಂದ್ರಕ್ಕೆ ಇತಿಹಾಸದ ಕುರಿತು ಗೌರವ ಇಲ್ಲ. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಯಾವುದೇ ಕೊಡುಗೆ ನೀಡದವರು ಇಂದು ಇತಿಹಾಸವನ್ನು ಬದಲಿಸಲು ಪ್ರಯತ್ನಿಸುತ್ತಿದ್ದಾರೆ

-ನಿತೀಶ್‌ ಕುಮಾರ್‌, ಬಿಹಾರ ಮುಖ್ಯಮಂತ್ರಿ

ಕೆಲವರನ್ನು ಸಂಸತ್ತಿನಿಂದ ಹೊರ ಹಾಕಿದ್ದು ಬೇರೆ ವಿಷಯ. ಕಲಾಪ ನಡೆಸಲು ಬಿಡುತ್ತಿಲ್ಲ ಎಂದು ಈ ಹಿಂದೆ ಇವರೇ ಹೇಳುತ್ತಿದ್ದರು. ಆದರೆ, ಈಗ ಇವರೇ ಬಹಿಷ್ಕಾರದ ಮಾತನಾಡುತ್ತಿದ್ದಾರೆ

-ಅನುರಾಗ್‌ ಠಾಕೂರ್‌, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ

ಉದ್ಘಾಟನೆಯ ಬಗ್ಗೆ ನಮ್ಮೊಂದಿಗೆ (ಸಂಸದರು) ಯಾರೂ ಸಮಾಲೋಚನೆ ನಡೆಸಿಲ್ಲ. ಆದ್ದರಿಂದ ವಿರೋಧ ಪಕ್ಷದ ಹಿರಿಯ ನಾಯಕರು ಕಾರ್ಯಕ್ರಮದಿಂದ ದೂರ ಇರಲು ನಿರ್ಧರಿಸಿದರು. ನಾನೂ ಒಪ್ಪಿದೆ

-ಶರದ್‌ ಪವಾರ್‌, ಎನ್‌ಸಿಪಿ ಮುಖ್ಯಸ್ಥ

ನೂತನ ಸಂಸತ್ ಭವನವನ್ನು ರಾಷ್ಟ್ರಪತಿ ಬದಲು, ಪ್ರಧಾನಿ ಉದ್ಘಾಟಿಸುವ ಮೂಲಕ ದೇಶದ ಪ್ರಜಾಸತ್ತಾತ್ಮಕ ಚೌಕಟ್ಟಿನ ಸಂಪ್ರದಾಯ ಹಾಳುಗೆಡವುತ್ತಿದ್ದಾರೆ

-ಗೌರವ್‌ ವಲ್ಲಬ್‌, ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.