ನಿತೀಶ್ ಕುಮಾರ್
ಪಿಟಿಐ
ಪಟ್ನಾ: ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ಕಾರ್ಯಕ್ರಮವೊಂದರಲ್ಲಿ ತಮಗೆ ಉಡುಗೊರೆಯಾಗಿ ನೀಡಿದ ಚಿಕ್ಕ ಹೂಕುಂಡವನ್ನು ಹಿರಿಯ ಐಎಎಸ್ ಅಧಿಕಾರಿಯೊಬ್ಬರ ತಲೆಯ ಮೇಲೆ ಇಟ್ಟಿರುವ ಘಟನೆ ನಡೆದಿದೆ. ಅವರ ಈ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವಿಪಕ್ಷ ಆರ್‌ಜೆಡಿಯು, ಇದು ಅವರ ಮಾನಸಿಕ ಸ್ಥಿತಿಯನ್ನು ತೋರ್ಪಡಿಸುತ್ತದೆ ಎಂದು ಹರಿಹಾಯ್ದಿದೆ.
ಪಟ್ನಾದ ಎಲ್.ಎನ್. ಮಿಶ್ರಾ ಇನ್‌ಸ್ಟಿಟಿಟ್ಯೂಟ್‌ನಲ್ಲಿ ಈ ಘಟನೆ ನಡೆದಿದೆ. ಅಲ್ಲಿ ನಿತೀಶ್ ಅವರು ಸುಮಾರು ₹10 ಕೋಟಿ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಹೊಸದಾಗಿ ನೇಮಕಗೊಂಡ 20 ಬೋಧಕರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಶಿಕ್ಷಣ) ಎಸ್. ಸಿದ್ಧಾರ್ಥ್ ಅವರು ನಿತೀಶ್ ಕುಮಾರ್ ಅವರಿಗೆ ಚಿಕ್ಕ ಹೂವಿನ ಕುಂಡವನ್ನು ಉಡುಗೊರೆಯಾಗಿ ನೀಡಿದರು. ಸ್ವೀಕರಿಸಿದ ಕೂಡಲೇ ನಿತೀಶ್ ಅವರು ಅದನ್ನು ಅಧಿಕಾರಿಯ ತಲೆಯ ಮೇಲೆ ಇರಿಸಿದರು. ಆಗ, ಅಲ್ಲಿದ್ದ ಬಹುತೇಕರು ಮುಖ್ಯಮಂತ್ರಿಯ ಈ ನಡೆಯಿಂದ ತಬ್ಬಿಬ್ಬಾದರು. ಸಿದ್ಧಾರ್ಥ್ ಅವರು ತಕ್ಷಣವೇ ಹೂಕುಂಡವನ್ನು ತಲೆಯ ಮೇಲಿಂದ ತೆಗೆದುಹಾಕಿ, ನಿರ್ಗಮಿಸಿದರು. ಇಡೀ ಪ್ರಸಂಗದ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
‘ಈ ಘಟನೆ ಅತ್ಯಂತ ಆಘಾತಕಾರಿ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ. ನಿತೀಶ್ ಅವರ ನಡವಳಿಕೆ ರಾಜ್ಯಕ್ಕೆ ನಾಚಿಕೆಯುಂಟು ಮಾಡುತ್ತಿದೆ. ಇದು ಅವರ ಮನಸ್ಸು ನಿಯಂತ್ರಣದಲ್ಲಿಲ್ಲ ಎನ್ನುವುದನ್ನು ತೋರಿಸುತ್ತದೆ. ನಿತೀಶ್ ಬಿಹಾರದ ಅತ್ಯಂತ ದುರ್ಬಲ ಮುಖ್ಯಮಂತ್ರಿ ಎನಿಸಿದ್ದಾರೆ’ ಎಂದು ಆರ್‌ಜೆಡಿ ವಕ್ತಾರ ಮೃತ್ಯುಂಜಯ್ ತಿವಾರಿ ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.