ನವದೆಹಲಿ: ‘ಈ ದೇಶದಲ್ಲಿ ಕಾನೂನಿಗಿಂತ ಯಾರೂ ಮೇಲಲ್ಲ’ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಒಬ್ಬ ಉದ್ಯಮಿ ಮತ್ತು ಐಪಿಎಸ್ ಅಧಿಕಾರಿಯಾಗಿರುವ ಅವರ ಪತ್ನಿ ನಡುವಣ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಹೇಳಿಕೆ ನೀಡಿದೆ.
ದಂಪತಿ ಪರಸ್ಪರ ದೂರವಾಗಿದ್ದು, ಕಳೆದ ಕೆಲ ಸಮಯಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ‘ವಿಚ್ಛೇದಿತ ಪತ್ನಿಯು ಐಪಿಎಸ್ ಅಧಿಕಾರಿಯಾಗಿರುವ ಕಾರಣ ತನ್ನ ಕಕ್ಷಿದಾರ ಜೀವನ ಪರ್ಯಂತ ಕಷ್ಟ ಅನುಭವಿಸಬೇಕಾಗುತ್ತದೆ’ ಎಂದು ಉದ್ಯಮಿ ಪರ ಹಾಜರಿದ್ದ ವಕೀಲರು ತಮ್ಮ ಆತಂಕ ತೋಡಿಕೊಂಡಾಗ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಆಗಸ್ಟಿನ್ ಜಾರ್ಜ್ ಮಸೀಹ್ ಮತ್ತು ಕೆ.ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
‘ಈ ದೇಶದಲ್ಲಿ ಯಾರೂ ಕಾನೂನಿಗಿಂತ ಮೇಲಲ್ಲ. ಕಕ್ಷಿದಾರರು ನ್ಯಾಯದ ಹಿತದೃಷ್ಟಿಯಿಂದ ತಮ್ಮ ವಿವಾದಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು’ ಎಂದು ಪೀಠ ಹೇಳಿತು.
‘ಆಕೆ ಐಪಿಎಸ್ ಅಧಿಕಾರಿ, ನೀವು ಉದ್ಯಮಿ. ನ್ಯಾಯಾಲಯದಲ್ಲಿ ನಿಮ್ಮ ಸಮಯವನ್ನು ವ್ಯರ್ಥ ಮಾಡುವ ಬದಲು ಇಬ್ಬರೂ ಮಾತುಕತೆ ಮೂಲಕ ವಿವಾದವನ್ನು ಇತ್ಯರ್ಥಪಡಿಸಬೇಕು. ಅನ್ಯಾಯಕ್ಕೆ ಒಳಗಾದರೆ ನಿಮ್ಮನ್ನು ರಕ್ಷಿಸಲು ನಾವಿದ್ದೇವೆ’ ಎಂದು ಪೀಠವು ವಕೀಲರಿಗೆ ತಿಳಿಸಿತು.
‘ಕಕ್ಷಿದಾರರು ಮಾತುಕತೆ ಮೂಲಕ ವಿವಾದಗಳಿಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ’ ಎಂದು ಎರಡೂ ಕಡೆಯ ವಕೀಲರು ಪೀಠಕ್ಕೆ ತಿಳಿಸಿದರು. ಪೀಠವು ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.