ADVERTISEMENT

ಕೋವಿಡ್ ಲಸಿಕೆ ಆದೇಶಗಳಿಂದ ಯಾರೂ ಉದ್ಯೋಗ ಕಳೆದುಕೊಳ್ಳಲ್ಲ: ಸುಪ್ರೀಂಗೆ ಕೇಂದ್ರ

ಆಶಿಶ್ ತ್ರಿಪಾಠಿ
Published 31 ಜನವರಿ 2022, 16:41 IST
Last Updated 31 ಜನವರಿ 2022, 16:41 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ:ವಿವಿಧ ರಾಜ್ಯಗಳು ಮತ್ತು ಅಧಿಕಾರಿಗಳು ಹೊರಡಿಸಿರುವ ಕೋವಿಡ್ -19 ಲಸಿಕೆ ಆದೇಶಗಳಿಂದಾಗಿ ಜನರು ತಮ್ಮ ಉದ್ಯೋಗ ಮತ್ತು ಪಡಿತರವನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ವಾದವನ್ನು ಕೇಂದ್ರವು ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ವಿರೋಧಿಸಿದೆ.

ಲಸಿಕೆ ಕಾರಣದಿಂದಾಗಿ 'ಯಾರೂ ಏನನ್ನೂ ಕಳೆದುಕೊಳ್ಳುವುದಿಲ್ಲ' ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿ ಆರ್ ಗವಾಯಿ ಅವರ ಪೀಠಕ್ಕೆ ತಿಳಿಸಿದರು, ಈ ಪ್ರಕರಣವು ಲಸಿಕೆಗಳ ಕ್ಲಿನಿಕಲ್ ಪ್ರಯೋಗಗಳ ಡೇಟಾವನ್ನು ಬಹಿರಂಗಪಡಿಸಲು ಸಹ ಸಂಬಂಧಿಸಿದ್ದಾಗಿದೆ.

ರಾಷ್ಟ್ರೀಯ ಲಸಿಕಾ ತಾಂತ್ರಿಕ ಸಲಹಾ ಗುಂಪಿನ ಮಾಜಿ ಸದಸ್ಯ ಡಾ. ಜೇಕಬ್ ಪುಲಿಯೆಲ್ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ಲಸಿಕೆ ಆದೇಶದಿಂದಾಗಿ ಜನರು ತಮ್ಮ ಉದ್ಯೋಗ ಮತ್ತು ಪಡಿತರವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಅಲ್ಲದೆ, ಇದರಿಂದ ಮುಕ್ತವಾಗಿ ತಿರುಗಾಡಲು ಸಾಧ್ಯವಾಗುತ್ತಿಲ್ಲ ಎಂದರು.

ADVERTISEMENT

ಈ ಮಧ್ಯೆ, ಲಸಿಕೆ ಆದೇಶಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಈ ನ್ಯಾಯಾಲಯವು ನಿರ್ಧರಿಸಲು ಸಾಧ್ಯವಾಗದಿರಬಹುದು. ಏಕೆಂದರೆ, ಲಸಿಕೆಗೆ ಸಂಬಂಧಿಸಿದ ಸಂದರ್ಭಗಳು ಬೇರೆ ಬೇರೆಯಾಗಿರಬಹುದು ಎಂದು ಪೀಠ ಹೇಳಿದೆ.

ಆದರೂ, ಲಸಿಕೆಗಳ ಮೇಲಿನ ಪ್ರಯೋಗದ ಡೇಟಾವನ್ನು ಬಹಿರಂಗಪಡಿಸಲು ಸಂಬಂಧಿಸಿದ ಮುಖ್ಯ ಅರ್ಜಿಯನ್ನು ಪರಿಗಣಿಸಲು ನ್ಯಾಯಾಲಯವು ಒಪ್ಪಿಕೊಂಡಿತು.

ಸಂಬಂಧಿತ ವ್ಯಕ್ತಿಯ ಒಪ್ಪಿಗೆಯನ್ನು ಪಡೆಯದೆ ಯಾವುದೇ ಬಲವಂತದ ಕೋವಿಡ್ ಲಸಿಕೆಯನ್ನು ಹಾಕಲು ಮಾರ್ಗಸೂಚಿಗಳಲ್ಲಿ ಅವಕಾಶ ಇಲ್ಲ ಎಂದು ಕೇಂದ್ರ ಸರ್ಕಾರವು ಈ ಹಿಂದೆ ಪ್ರತ್ಯೇಕ ಪ್ರಕರಣದಲ್ಲಿ ಉನ್ನತ ನ್ಯಾಯಾಲಯಕ್ಕೆ ತಿಳಿಸಿತ್ತು.

ಯಾವುದೇ ವ್ಯಕ್ತಿಗೆ ಅವನ ಅಥವಾ ಅವಳ ಇಚ್ಛೆಗೆ ವಿರುದ್ಧವಾಗಿ ಲಸಿಕೆ ಹಾಕಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರವು ತನ್ನ ನಿಲುವನ್ನು ಪುನರುಚ್ಚರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.