ಹೃದಯ
ಶ್ರೀನಗರ: ದೇಶದ ಖ್ಯಾತ ಹೃದ್ರೋಗ ತಜ್ಞ ಉಪೇಂದ್ರ ಕೌಲ್ ಅವರು ದಕ್ಷಿಣ ಕಾಶ್ಮೀರದ ಪುಲ್ವಾಮಾ, ಶೋಪಿಯಾನ್ ಮತ್ತು ಕುಲ್ಗಾಮ್ ಜಿಲ್ಲೆಗಳಲ್ಲಿ ಸರಿಯಾದ ರಸ್ತೆ ಸಂಪರ್ಕಗಳಿಲ್ಲದ ಪ್ರದೇಶಗಳಲ್ಲಿ ಜನರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ‘ಹಾರ್ಟ್ ಕ್ಲಿನಿಕ್ ಆನ್ ವ್ಹೀಲ್ಸ್’ ಎಂಬ ಯೋಜನೆಯನ್ನು ಗುರುವಾರ ಆರಂಭಿಸಿದರು.
5ರಿಂದ 15 ವರ್ಷದೊಳಗಿನ ಮಕ್ಕಳಲ್ಲಿ ಸ್ಥೂಲಕಾಯದ ಜತೆಗೆ ಸಂಧಿವಾತ ಮತ್ತು ಜನ್ಮಜಾತ ಹೃದಯ ಕಾಯಿಲೆಗಳನ್ನು ಪತ್ತೆಹಚ್ಚಲು ಶಾಲಾ ಸಮೀಕ್ಷೆಗಳಿಗೆ ಈ ಸಂಚಾರಿ ಕ್ಲಿನಿಕ್ ಬಳಸಲಾಗುವುದು ಎಂದು ಕೌಲ್ ಹೇಳಿದರು.
ಮಹತ್ವಾಕಾಂಕ್ಷೆಯ ‘ನೋ ಹಾರ್ಟ್ ಅಟ್ಯಾಕ್ ಮಿಷನ್’ ಭಾಗವಾಗಿರುವ ಈ ನವೀನ ಯೋಜನೆಯನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಸಹಯೋಗದೊಂದಿಗೆ ಗೌರಿ ಕೌಲ್ ಫೌಂಡೇಶನ್ (ಜಿಕೆಎಫ್) ಪ್ರಾರಂಭಿಸಿದೆ ಎಂದು ಅವರು ಹೇಳಿದರು.
ಪುಲ್ವಾಮಾದ ಹವಾಲ್ ಗ್ರಾಮದಲ್ಲಿ ‘ಹಾರ್ಟ್ ಕ್ಲಿನಿಕ್ ಆನ್ ವೀಲ್ಸ್’ಗೆ ಚಾಲನೆ ನೀಡಿದ ವೇಳೆ ಮಾತನಾಡಿದ ಅವರು, ‘ಸಂಚಾರಿ ಕ್ಲಿನಿಕ್ ಇಸಿಜಿ, ಡಾಪ್ಲರ್‌ನೊಂದಿಗೆ ಪೋರ್ಟಬಲ್ ಎಕೋಕಾರ್ಡಿಯೋಗ್ರಫಿ ಮತ್ತು ಸುಧಾರಿತ ರೋಗನಿರ್ಣಯ ಸಾಧನಗಳನ್ನು ಒಳಗೊಂಡಿದೆ. ಹೃದಯ ವೈಫಲ್ಯ (ಎನ್‌ಟಿ-ಪ್ರೊ ಬಿಎನ್‌ಪಿ) ಹೃದಯ ಸ್ನಾಯುವಿನ ಗಾಯ (ಟ್ರೋಪೋನಿನ್ಸ್), ಮಧುಮೇಹ (ಎಚ್‌ಬಿಎ1ಸಿ), ರಕ್ತ ಹೆಪ್ಪುಗಟ್ಟುವಿಕೆ ಪತ್ತೆಹಚ್ಚುವ ಸೌಲಭ್ಯಗಳನ್ನು ಸಹ ಇದು ಹೊಂದಿದೆ. ಆರಂಭದಲ್ಲಿ, ಈ ಕ್ಲಿನಿಕ್ ಪುಲ್ವಾಮಾ, ಶೋಪಿಯಾನ್ ಮತ್ತು ಕುಲ್ಗಾಮ್ ಜಿಲ್ಲೆಗಳ ದುರ್ಗಮ ಪ್ರದೇಶಗಳಲ್ಲಿ ಸೇವೆ ಒದಗಿಸಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.