ADVERTISEMENT

ಲೈಂಗಿಕ ದೌರ್ಜನ್ಯ ಆರೋಪ; ಎನ್‌ಎಸ್‌ಯುಐ ಅಧ್ಯಕ್ಷ ರಾಜೀನಾಮೆ

ಪಿಟಿಐ
Published 16 ಅಕ್ಟೋಬರ್ 2018, 11:35 IST
Last Updated 16 ಅಕ್ಟೋಬರ್ 2018, 11:35 IST
ಫೈರೋಜ್ ಖಾನ್
ಫೈರೋಜ್ ಖಾನ್   

ನವದೆಹಲಿ:ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ‘ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ’ದ (ಎನ್‌ಎಸ್‌ಯುಐ) ರಾಷ್ಟ್ರೀಯ ಅಧ್ಯಕ್ಷ ಫೈರೋಜ್ ಖಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದ ಕಾರಣ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಅದನ್ನು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅಂಗೀಕರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಖಾನ್ ಸೋಮವಾರ ರಾತ್ರಿ ರಾಜೀನಾಮೆ ಪತ್ರ ಸಲ್ಲಿಸಿದ್ದರು. ‘ಲೈಂಗಿಕ ಆರೋಪದಿಂದ ಪಕ್ಷದ ಘನತೆಗೆ ಧಕ್ಕೆಯಾಗುತ್ತದೆ. ಪಕ್ಷದ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ರಾಜೀನಾಮೆ ಸಲ್ಲಿಸುತ್ತಿದ್ದೇನೆ’ ಎಂದು ಖಾನ್ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

‘ನನ್ನ ಮೇಲೆ, ನನ್ನ ತಂಗಿಯ ಮೇಲೆ ಮತ್ತು ಪಕ್ಷದ ಮತ್ತಷ್ಟು ಕಾರ್ಯಕರ್ತೆಯರ ಮೇಲೆ ಫೈರೋಜ್ ಖಾನ್ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ’ ಎಂದುಛತ್ತೀಸಗಡದ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ಇಲ್ಲಿನ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ADVERTISEMENT

ಈ ದೂರನ್ನು ಪರಿಶೀಲಿಸಲು ಕಾಂಗ್ರೆಸ್ ಉನ್ನತ ಮಟ್ಟದ ಆಂತರಿಕ ಸಮಿತಿಯನ್ನು ರಚಿಸಿದೆ. ಆ ಸಮಿತಿ ಇನ್ನಷ್ಟೇ ವರದಿ ನೀಡಬೇಕಿದೆ.

ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವಕೇಂದ್ರ ಸಚಿವ ಎಂ.ಜೆ.ಅಕ್ಬರ್ ಅವರ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸುತ್ತಿದೆ. ತನ್ನ ಪಕ್ಷದ ನಾಯಕರ ಮೇಲೆ ಬಂದಿರುವ ಲೈಂಗಿಕ ದೌರ್ಜನ್ಯದ ಆರೋಪದ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ, ಅಕ್ಬರ್‌ ರಾಜೀನಾಮೆಗೆ ಒತ್ತಾಯಿಸುವ ನೈತಿಕತೆ ಕಾಂಗ್ರೆಸ್‌ಗೆ ಇರುವುದಿಲ್ಲ. ಹೀಗಾಗಿ ಫೈರೋಜ್ ಖಾನ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ವಿವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.