ADVERTISEMENT

ಜಮ್ಮು- ಕಾಶ್ಮೀರದಲ್ಲಿ ತಗ್ಗಿದ ಭಯೋತ್ಪಾದನೆ: ಕೇಂದ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 13:11 IST
Last Updated 28 ಜುಲೈ 2021, 13:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಎರಡು ವರ್ಷಗಳಲ್ಲಿ ಭಯೋತ್ಪಾದನಾ ಕೃತ್ಯಗಳು ಕಡಿಮೆಯಾಗಿವೆ ಎಂದು ಕೇಂದ್ರ ಸರ್ಕಾರ ಬುಧವಾರ ಸಂಸತ್ತಿಗೆ ತಿಳಿಸಿದೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರೈ, ‘2019 ಕ್ಕೆ ಹೋಲಿಸಿದರೆ 2020ರಲ್ಲಿ ಭಯೋತ್ಪಾದನಾ ಕೃತ್ಯಗಳು ಶೇ 59ರಷ್ಟು ಕಡಿಮೆಯಾಗಿದೆ. 2020ರ ಜೂನ್‌ವರೆಗಿನ ಅವಧಿಗೆ ಹೋಲಿಸಿದರೆ 2021ರ ಜೂನ್‌ವರೆಗೆ ಶೇ 32ರಷ್ಟು ಕಡಿಮೆಯಾಗಿದೆ’ ಎಂದು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸನ್ನಿವೇಶ ಸುಧಾರಿಸಲು ಕೈಗೊಂಡ ಕ್ರಮಗಳ ವಿವರಗಳನ್ನು ಕೋರಿ ಗೃಹ ಸಚಿವಾಲಯಕ್ಕೆ ಕೇಳಲಾಗಿದ್ದ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ.

ADVERTISEMENT

‘ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಅಂಗಡಿಗಳು, ವ್ಯಾಪಾರ ಕೇಂದ್ರಗಳು, ಸಾರ್ವಜನಿಕ ಸಾರಿಗೆ, ಸರ್ಕಾರಿ ಕಚೇರಿಗಳು, ಶೈಕ್ಷಣಿಕ ಮತ್ತು ಆರೋಗ್ಯ ಸಂಸ್ಥೆಗಳು ಇತ್ಯಾದಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಭಯೋತ್ಪಾದನೆ ಬಗ್ಗೆ ಸರ್ಕಾರ ನಿರ್ದಯ ನೀತಿ ಅಳವಡಿಸಿಕೊಂಡಿದೆ. ಭದ್ರತಾ ಉಪಕರಣಗಳ ಬಲಪಡಿಸುವಿಕೆ, ರಾಷ್ಟ್ರ ವಿರೋಧಿ ಶಕ್ತಿಗಳ ವಿರುದ್ಧ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿ, ಭಯೋತ್ಪಾದಕ ಸಂಘಟನೆಗಳ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಗಸ್ತು ಮತ್ತು ಶೋಧ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲಾಗಿದೆ’ ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.

‘ಭಯೋತ್ಪಾದಕರಿಗೆ ಕುಮ್ಮಕ್ಕು ನೀಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಭದ್ರತಾ ಪಡೆಗಳು ಸೂಕ್ಷ್ಮ ನಿಗಾ ಇಟ್ಟಿವೆ. ಯುವಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದು, ಉಗ್ರಗಾಮಿತ್ವದಿಂದ ಯುವಜನರು ದೂರವಿರುವಂತೆ ಮಾಡುವ ನೀತಿಗಳನ್ನು ಸರ್ಕಾರವು ನಿರಂತರ ಪ್ರೋತ್ಸಾಹಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಆಂತರಿಕ ಭದ್ರತೆ ಬಲಪಡಿಸಲು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾಕಷ್ಟು ಸಂಖ್ಯೆಯಲ್ಲಿ ಭದ್ರತಾಪಡೆಗಳನ್ನೂ ನಿಯೋಜಿಸಲಾಗಿದೆ’ ಎಂದು ಸಚಿವ ರೈ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.