HAL - Associate_page-0001
ನವದೆಹಲಿ: ಬ್ರಿಟನ್‌ನ ಎಚ್.ಆರ್. ಸ್ಮಿತ್ ಎಂಬ ಕಂಪನಿಯು ಟ್ರಾನ್ಸ್‌ಮೀಟರ್ಸ್, ಕಾಕ್‌ಪಿಟ್ ಸಲಕರಣೆ, ಆ್ಯಂಟೆನಾಗಳು ಸೇರಿದಂತೆ ಸೇನೆಗೆ ಸಂಬಂಧಿಸಿದ ಕೆಲವು ಸೂಕ್ಷ್ಮ ತಂತ್ರಜ್ಞಾನಗಳನ್ನು ಭಾರತದ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ (ಎಚ್‌ಎಎಲ್) ಮಾರಿದೆ. ಈ ತಂತ್ರಜ್ಞಾನ ಹಾಗೂ ಕೆಲವು ಸಲಕರಣೆಗಳ ಭಾಗಗಳನ್ನು ಎಚ್‌ಎಎಲ್ ಕಂಪನಿಯು ರಷ್ಯಾದ ಸರ್ಕಾರಿ ಸ್ವಾಮ್ಯದ ‘ರೊಸೋಬೊರೋನ್‌ಎಕ್ಸ್‌ಪೋರ್ಟ್’ ಕಂಪನಿಗೆ ಮಾರಾಟ ಮಾಡಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಈ ವರದಿಯನ್ನು ಭಾರತ ತಳ್ಳಿ ಹಾಕಿದೆ.
‘ಉಕ್ರೇನ್ ವಿರುದ್ಧ ಯುದ್ಧಕ್ಕೆ ಬಳಕೆ’
‘2023ರಿಂದ 2024ರವರೆಗೆ 2 ಮಿಲಿಯನ್ ಡಾಲರ್ (ಸುಮಾರು ₹17.11 ಕೋಟಿ) ಮೌಲ್ಯದ 118 ತಂತ್ರಜ್ಞಾನ ಹಾಗೂ ಸಲಕರಣೆಗಳನ್ನು ಸ್ಮಿತ್ ಕಂಪನಿಯು ಎಚ್‌ಎಎಲ್‌ಗೆ ನೀಡಿದೆ. ಈ ತಂತ್ರಜ್ಞಾನಗಳು, ಕೆಲವು ಕೋಡ್‌ಗಳು ನೇರವಾಗಿ ರಷ್ಯಾಗೆ ಹೋಗಿವೆ ಎನ್ನಲಾಗದು. ಆದರೆ, ಸ್ಮಿತ್ ಕಂಪನಿಯು ಎಚ್‌ಎಎಲ್‌ಗೆ ಸಲಕರಣೆಗಳನ್ನು ನೀಡಿದ ಕೆಲವೇ ದಿನಗಳಲ್ಲಿ ಅದೇ ಸಲಕರಣೆಗಳನ್ನು ಹೋಲುವ ಕೆಲವು ಭಾಗಗಳನ್ನು ರಷ್ಯಾಗೆ ರವಾನಿಸಿದ ಸಾಕ್ಷ್ಯ ದೊರೆತಿದೆ’ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
‘ಈ ಸಲಕರಣೆಗಳನ್ನು ರಷ್ಯಾವು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಬಳಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಯುದ್ಧ ಆರಂಭವಾದ ಬಳಿಕ ಬ್ರಿಟನ್ ಹಾಗೂ ಅಮೆರಿಕವು ರಷ್ಯಾದ ಮೇಲೆ ಹಲವು ನಿರ್ಬಂಧಗಳನ್ನು ಹೇರಿದ್ದವು. ಕೆಲವೇ ದಿನಗಳಲ್ಲಿ 13 ತಂತ್ರಜ್ಞಾನಗಳನ್ನು ಎಚ್‌ಎಎಲ್ ಕಂಪನಿಯು ರಷ್ಯಾಗೆ ನೀಡಿದೆ. ಇದಕ್ಕೆ ರಷ್ಯಾವು 14 ಮಿಲಿಯನ್ ಡಾಲರ್‌ಗೂ (ಸುಮಾರು ₹119.8 ಕೋಟಿ) ಅಧಿಕ ಹಣ ಪಾವತಿಸಿದೆ. ‘ತಾವು ಕಾನೂನು ರೀತಿಯಲ್ಲಿಯೇ ವ್ಯಾಪಾರ ಮಾಡಿದ್ದೇವೆ’ ಎಂದು ಸ್ಮಿತ್ ಕಂಪನಿ ಹೇಳಿದೆ’ ಎಂದಿದೆ.
ತಪ್ಪು ಮಾಹಿತಿ: ಭಾರತ
‘ರಷ್ಯಾದ ಸೇನಾ ಸಂಸ್ಥೆಯೊಂದಿಗೆ ಎಚ್‌ಎಎಲ್ ಒಪ್ಪಂದ ಮಾಡಿಕೊಂಡಿದೆ ಎನ್ನುವುದು ತಪ್ಪು ಮಾಹಿತಿಯಾಗಿದೆ. ಇದು ದಾರಿತಪ್ಪಿಸುವ ವರದಿಯಾಗಿದ್ದು, ರಾಜಕೀಯ ಸಂಕಥನವೊಂದಕ್ಕೆ ಒಗ್ಗಿಸಲಾಗಿದೆ. ವ್ಯಾಪಾರ ಕುರಿತು ಇರುವ ಎಲ್ಲ ಅಂತರರಾಷ್ಟ್ರೀಯ ನಿಯಮಗಳನ್ನು ಎಚ್‌ಎಎಲ್ ಪಾಲಿಸಿದೆ. ಪ್ರತಿಷ್ಠಿತ ಪತ್ರಿಕೆಯು ಇಂಥ ವರದಿ ಮಾಡುವಾಗ ಸೂಕ್ತ ರೀತಿಯಲ್ಲಿ ಸಂಶೋಧನೆ ಮಾಡಬೇಕಾಗುತ್ತದೆ’ ಎಂದು ಭಾರತದ ವಿದೇಶಾಂಗ ಸಚಿವಾಲಯವು ಸೋಮವಾರ ಹೇಳಿಕೆ ಬಿಡುಗಡೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.