ADVERTISEMENT

ಬಿಜೆಪಿಯದ್ದು ‘ರಾಷ್ಟ್ರ ಭಕ್ತಿ’, ಪ್ರತಿಸ್ಪರ್ಧಿಗಳದ್ದು ‘ಪರಿವಾರ ಭಕ್ತಿ’: ಮೋದಿ

ಪಿಟಿಐ
Published 6 ಏಪ್ರಿಲ್ 2022, 6:19 IST
Last Updated 6 ಏಪ್ರಿಲ್ 2022, 6:19 IST
ಪ್ರಧಾನಿ ನರೇಂದ್ರ ಮೋದಿ: BJP4India ಟ್ವಿಟರ್ ಖಾತೆಯ ಚಿತ್ರ
ಪ್ರಧಾನಿ ನರೇಂದ್ರ ಮೋದಿ: BJP4India ಟ್ವಿಟರ್ ಖಾತೆಯ ಚಿತ್ರ   

ನವದೆಹಲಿ: ನಮ್ಮ ಪ್ರತಿಸ್ಪರ್ಧಿಗಳು ‘ಪರಿವಾರ ಭಕ್ತಿ’ಗಾಗಿ ನಿಂತರೆ ಬಿಜೆಪಿ ‘ರಾಷ್ಟ್ರ ಭಕ್ತಿ’ಗೆ ಸಮರ್ಪಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಪ್ರತಿಪಾದಿಸಿದ್ದಾರೆ. ಪಕ್ಷವು ಈ ವಿಷಯವನ್ನು ಚುನಾವಣಾ ವಸ್ತುವನ್ನಾಗಿ ಮಾಡಿ ಅಪಾಯಕಾರಿ ಕುಟುಂಬ ರಾಜಕಾರಣದ ಬಗ್ಗೆ ಜನರಿಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಕ್ಕೆ ಪ್ರತಿಯೊಬ್ಬ ಬಿಜೆಪಿ ಸದಸ್ಯ ಹೆಮ್ಮೆಪಡಬೇಕು ಎಂದು ಹೇಳಿದ್ದಾರೆ.

ಬಿಜೆಪಿಯ 42ನೇ ಸಂಸ್ಥಾಪನಾ ದಿನದಂದು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಟುಂಬ ಆಡಳಿತಕ್ಕೆ ಮೀಸಲಾಗಿರುವ ಪಕ್ಷಗಳು ಸಾಂವಿಧಾನಿಕ ಮಾನದಂಡಗಳ ಬಗ್ಗೆ ಕಿಂಚಿತ್ತೂ ಗಮನ ಹರಿಸುವುದಿಲ್ಲ. ವಿವಿಧ ರಾಜ್ಯಗಳಲ್ಲಿ ಸಕ್ರಿಯವಾಗಿರುವ ಆ ಪಕ್ಷಗಳು ಪರಸ್ಪರ ಭ್ರಷ್ಟಾಚಾರ ಮತ್ತು ದುಷ್ಕೃತ್ಯಗಳನ್ನು ಮುಚ್ಚಿಹಾಕುತ್ತಿವೆ ಎಂದು ಹೇಳಿದರು.

ಅವರು ದೇಶದ ಯುವ ಪ್ರತಿಭೆಗಳಿಗೆ ಬೆಳೆಯಲು ಅವಕಾಶ ನೀಡಲಿಲ್ಲ ಮತ್ತು ಅವರಿಗೆ ದ್ರೋಹ ಬಗೆದರು ಎಂದು ಮೋದಿ ಯಾವುದೇ ಪಕ್ಷವನ್ನು ಹೆಸರಿಸದೆ ವಾಗ್ದಾಳಿ ನಡೆಸಿದರು.

ADVERTISEMENT

ಕೇಂದ್ರ ಮತ್ತು ರಾಜ್ಯಗಳಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರಗಳು ಯಾವುದೇ ಪಕ್ಷಪಾತವಿಲ್ಲದೆ ಪ್ರತಿಯೊಬ್ಬ ಫಲಾನುಭವಿಗೆ ಕಲ್ಯಾಣ ಯೋಜನೆಗಳನ್ನು ತಲುಪಿಸಲು ಕೆಲಸ ಮಾಡಿವೆ ಎಂದು ಮೋದಿ ಪ್ರತಿಪಾದಿಸಿದರು, ಇದು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ಧ್ಯೇಯವಾಕ್ಯವನ್ನು ಪ್ರತಿಬಿಂಬಿಸುತ್ತದೆ ಎಂದರು.

ಈ ಹಿಂದೆ ಅಧಿಕಾರದಲ್ಲಿದ್ದ ಪಕ್ಷಗಳು ಮತಬ್ಯಾಂಕ್ ರಾಜಕಾರಣ ಮಾಡುತ್ತಿದ್ದವು, ಇದರಲ್ಲಿ ಸಮಾಜದ ಕೆಲವು ವರ್ಗಗಳಿಗೆ ಭರವಸೆಗಳನ್ನು ನೀಡಿ, ಇತರರನ್ನು ನಿರ್ಲಕ್ಷಿಸುತ್ತಿದ್ದರು. ತಾರತಮ್ಯ ಮತ್ತು ಭ್ರಷ್ಟಾಚಾರವು ‘ಈ ರೀತಿಯ ರಾಜಕೀಯದ ಅಡ್ಡ ಪರಿಣಾಮಗಳು’ಎಂದು ಅವರು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.