ಚೀನಾ ಯುದ್ಧಕ್ಕೆ ಸಜ್ಜಾಗುತ್ತಿದ್ದು, ಕೇಂದ್ರ ಸರ್ಕಾರ ಒಪ್ಪಿಕೊಳ್ಳುತ್ತಿಲ್ಲ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ರಾಹುಲ್ ಗಾಂಧಿ ಚೀನಾಕ್ಕೆ ಆತ್ಮೀಯರಾಗಿರುವುದರಿಂದ, ಅದು ಮುಂದೇನು ಮಾಡುತ್ತದೆ ಎಂಬುದು ಅವರಿಗೆ ತಿಳಿದಿದೆ ಎಂದು ಬಿಜೆಪಿ ಮಾಜಿ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ವ್ಯಂಗ್ಯವಾಡಿದ್ದಾರೆ.
ಭಾರತೀಯ ಸೈನಿಕರು ಡಿ.9ರಂದು ತವಾಂಗ್ ಕಾದಾಟದಲ್ಲಿ ಚೀನಾಕ್ಕೆ ದಿಟ್ಟ ಉತ್ತರ ನೀಡಿರುವಾಗ ನಮ್ಮ ಸೈನಿಕರು ಸೋತಿದ್ದಾರೆ ಎಂದು ರಾಹುಲ್ ಗಾಂಧಿ ಹೇಗೆ ಹೇಳುತ್ತಾರೆ? ಚೀನಾ ಅವರಿಗೆ ಸ್ನೇಹಿತ. ಹೀಗಾಗಿ ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ₹135 ಕೋಟಿ ದೇಣಿಗೆ ಕಮ್ಯುನಿಸ್ಟ್ ಸರ್ಕಾರದಿಂದ ಲಭಿಸಿತ್ತು ಎಂದು ರಾಥೋಡ್ ಕಿಡಿಕಾರಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ. ಚೀನಾದಿಂದ ರಾಹುಲ್ ಕುಟುಂಬ ದೇಣಿಗೆ ಪಡೆದಿರುವುದು ಒಂದು ರೀತಿಯ ಭ್ರಷ್ಟಾಚಾರ. ನೆಹರೂ ಹಾಗೂ ಕಾಂಗ್ರೆಸ್ ಕಾಲದಲ್ಲೇ ನಮ್ಮ ಭೂಮಿ ಚೀನಾ ಪಾಲಾಗಿತ್ತು ಎಂಬುದು ಎಲ್ಲರಿಗೂ ತಿಳಿದಿದೆ ಎಂದಿದ್ದಾರೆ.
ಅರುಣಾಚಲ ಪ್ರದೇಶ ಹಾಗೂ ಲಡಾಖ್ ಎರಡೂ ಗಡಿಗಳಲ್ಲಿ ಚೀನಾ ಯುದ್ಧದ ಸಿದ್ಧತೆ ನಡೆಸುತ್ತಿದೆ. ಆದರೆ ಕೇಂದ್ರ ಸರ್ಕಾರ ಚೀನಾದ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸರ್ಕಾರ ಮಲಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದರು.
ಭಾರತೀಯ ಸೈನಿಕರ ಶೌರ್ಯವನ್ನು ರಾಹುಲ್ ಗಾಂಧಿ ಅನುಮಾನಿಸುತ್ತಲೇ ಇದ್ದಾರೆ. ನಮ್ಮ ಸೈನಿಕರು ಚೀನಾದ ಸೈನಿಕರನ್ನು ಥಳಿಸುವ ಹೆಮ್ಮೆಯ ವಿಡಿಯೊಗಳನ್ನು ಪ್ರತಿಯೊಬ್ಬ ಭಾರತೀಯರು ನೋಡಿದ್ದಾರೆ. ರಾಹುಲ್ ಕುಟುಂಬವು ಚೀನೀ ಆತಿಥ್ಯವನ್ನು ಆನಂದಿಸಿದೆ ಎಂದು ಬಿಜೆಪಿಯ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನದ ಸಚಿವ ಬಿಲಾವಲ್ ಭುಟ್ಟೊಗೂ ರಾಹುಲ್ ಗಾಂಧಿಗೂ ಬಹಳ ಸಾಮ್ಯತೆ ಇದೆ. ಇಬ್ಬರ ವರ್ತನೆ, ಭಾಷೆ, ಪದ ಬಳಕೆ ಒಂದೇ ರೀತಿ ಇದೆ ಎಂದು ಮಾಳವೀಯ ಕುಹಕವಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.