ADVERTISEMENT

ಪಿಒಕೆ ಸ್ವಾಧೀನಕ್ಕೆ ಬದ್ಧ: ಶೌರ್ಯ ದಿವಸದಲ್ಲಿ ರಾಜನಾಥ್ ಸಿಂಗ್ ಹೇಳಿಕೆ

ಪಿಟಿಐ
Published 27 ಅಕ್ಟೋಬರ್ 2022, 17:15 IST
Last Updated 27 ಅಕ್ಟೋಬರ್ 2022, 17:15 IST
   

ಶ್ರೀನಗರ: ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಮತ್ತೆ ವಶಕ್ಕೆ ಪಡೆಯಲು ನಾವು ಬದ್ಧರಾಗಿದ್ದೇವೆ’ ಎಂದು ರಕ್ಷಣಾ→ಸಚಿವ ರಾಜನಾಥ್→ಸಿಂಗ್‌ ಹೇಳಿದ್ದಾರೆ.

ಗುರುವಾರ→ಇಲ್ಲಿ ನಡೆದ→ಶೌರ್ಯದಿವಸ→ಆಚರಣೆಯಲ್ಲಿ→ಅವರು ಈ→ಮಾತು ಹೇಳಿದ್ದಾರೆ. ಪಾಕಿಸ್ತಾನವು ಅಕ್ರಮವಾಗಿ ತನ್ನ ವಶದಲ್ಲಿ ಇರಿಸಿಕೊಮಡಿರುವ ಕಾಶ್ಮೀರ, ಗಿಲ್ಗಿಟ್‌–ಬಲ್ತಿಸ್ತಾನ ಪ್ರದೇಶವನ್ನು ಭಾರತವು ಮರುವಶ ಮಾಡಿಕೊಳ್ಳಬೇಕು ಎಂಬ ನಿರ್ಣಯವನ್ನು 1994ರಲ್ಲಿ ಸಂಸತ್ತಿನಲ್ಲಿ ಅವಿರೋಧವಾಗಿ ಅಂಗೀಕರಿಸಲಾಗಿತ್ತು. ಆ ನಿರ್ಣಯಕ್ಕೆ ನಮ್ಮ ಸರ್ಕಾರವು ಈಗಲೂ ಬದ್ಧವಾಗಿದೆ ಎಂದು ರಾಜನಾಥ್ ಹೇಳಿದ್ದಾರೆ.

‘ಪಿಒಕೆಯಲ್ಲಿ ನಾಗರಿಕರ ಮೇಲೆ ಪಾಕಿಸ್ತಾನದ ಕಿರುಕುಳ ಮತ್ತು ದೌರ್ಜನ್ಯ ಸಾಮಾನ್ಯ ಎಂಬಂತಾಗಿದೆ. ಅಲ್ಲಿನ ಜನರ ನೋವು ನಮಗೆ ಅರ್ಥವಾಗುತ್ತದೆ. ಅಲ್ಲಿನ ಜನರಿಗೆ ಕನಿಷ್ಠ ಸೌಲಭ್ಯಗಳನ್ನೂ ನಿರಾಕರಿಸಲಾಗಿದೆ. ಪಾಕಿಸ್ತಾನವು ಅಲ್ಲಿ ದ್ವೇಷವನ್ನು ಹುಟ್ಟುಹಾಕುತ್ತಿದೆ. ಇವೆಲ್ಲದರ ವಿರುದ್ಧ ಅಲ್ಲಿನ ಜನ ಶೀಘ್ರವೇ ಬಂಡಾಯ ಏಳಲಿದ್ದಾರೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಸೇನೆ ನಡೆಸುವ ಕಾರ್ಯಾಚರಣೆಗಳ ಬಗ್ಗೆ ಕೆಲವು ಬುದ್ಧಿಜೀವಿಗಳು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಆದರೆ, ಸಾಮಾನ್ಯ ಜನರ ಮೇಲೆ ಆ ಭಯೋತ್ಪಾದಕರು ನಿರ್ದಯವಾಗಿ ದಾಳಿ ನಡೆಸುವಾಗ ಇವರೆಲ್ಲಾ ಎಲ್ಲಿ ಹೋಗಿರುತ್ತಾರೆ’ ಎಂದು ರಾಜನಾಥ್ ಪ್ರಶ್ನಿಸಿದ್ದಾರೆ.

2019ರ ಆಗಸ್ಟ್‌ 5ಕ್ಕೂ ಮುನ್ನ ಕಾಶ್ಮೀರದಲ್ಲಿ ತಾರತಮ್ಯವಿತ್ತು, ಸಮಾಜ ವಿಭಜನೆಯಾಗಿತ್ತು. ಆದರೆ, ವಿಶೇಷ ಸ್ಥಾನಮಾನ ರದ್ದತಿಯ ನಂತರ ಸಮಾಜದ ಎಲ್ಲಾ ವರ್ಗದ ಜನರು ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಶೌರ್ಯ ದಿವಸ ಆಚರಣೆ

1947ರಲ್ಲಿ ಪಾಕಿಸ್ತಾನವು ಕಾಶ್ಮೀರವನ್ನು ಅಕ್ರಮಿಸಿಕೊಂಡಿತ್ತು. ಅಕ್ಟೋಬರ್ 27ರಂದು ವಾಯುಪಡೆಯ ವಿಮಾನಗಳು ಶ್ರೀನಗರದಲ್ಲಿ ಇಳಿದು, ಪಾಕಿಸ್ತಾನ ಸೇನೆಯ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದವು. ಆ ದಿನವನ್ನು ‘ಶೌರ್ಯ ದಿವಸ’ ಕರೆಯಲಾಗಿತ್ತು. ಆನಂತರ ಪ್ರತಿ ವರ್ಷವೂ ಅಕ್ಟೋಬರ್ 27ರಂದು ಶೌರ್ಯ ದಿವಸವನ್ನಾಗಿ ಆಚರಿಸಲಾಗುತ್ತದೆ. ಗುರುವಾರ 75ನೇ ಶೌರ್ಯ ದಿವಸವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.