ADVERTISEMENT

ಸೇನೆಯ ತ್ಯಾಗ ಬಲಿದಾನ ದುರ್ಬಳಕೆ: ಪ್ರತಿಪಕ್ಷಗಳ ಆರೋಪ

ಬಿಜೆಪಿ ವರ್ತನೆಗೆ ವಿರೋಧ ಪಕ್ಷಗಳ ನಾಯಕರ ತರಾಟೆ

ಪಿಟಿಐ
Published 27 ಫೆಬ್ರುವರಿ 2019, 18:36 IST
Last Updated 27 ಫೆಬ್ರುವರಿ 2019, 18:36 IST
ವಿರೋಧ ಪಕ್ಷಗಳ ಸಭೆಯ ಬಳಿಕ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸುದ್ದಿಗಾರರೊಂದಿಗೆ ಮಾತನಾಡಿದರು –ಪಿಟಿಐ ಚಿತ್ರ
ವಿರೋಧ ಪಕ್ಷಗಳ ಸಭೆಯ ಬಳಿಕ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸುದ್ದಿಗಾರರೊಂದಿಗೆ ಮಾತನಾಡಿದರು –ಪಿಟಿಐ ಚಿತ್ರ   

ನವದೆಹಲಿ: ಭಾರತೀಯ ಸೇನೆಯ ತ್ಯಾಗ, ಬಲಿದಾನಗಳನ್ನು ಆಡಳಿತಾರೂಢ ಬಿಜೆಪಿ ತನ್ನ ಕ್ಷುಲ್ಲಕ ರಾಜಕೀಯ ವೈಭವೀಕರಣಕ್ಕೆ ಬಳಸಿಕೊಳ್ಳುತ್ತಿದೆ ಎಂದು 21 ವಿರೋಧ ಪಕ್ಷಗಳು ಹರಿಹಾಯ್ದಿವೆ.

ಭಾರತದ ಏಕತೆ, ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ರಕ್ಷಿಸಲು ದೇಶದ ಜನತೆಯನ್ನು ವಿಶ್ವಾಸಕ್ಕೆ ತೆಗೆದು
ಕೊಳ್ಳುವಂತೆ ವಿರೋಧ ಪಕ್ಷಗಳು ಸರ್ಕಾರವನ್ನು ಒತ್ತಾಯಿಸಿವೆ.

ದೇಶದಲ್ಲಿ ನಿರ್ಮಾಣವಾಗಿರುವ ತ್ವೇಷಮಯ ಸ್ಥಿತಿಯನ್ನು ಕುರಿತು ಚರ್ಚಿಸಲು ವಿರೋಧ ಪಕ್ಷಗಳು ಬುಧವಾರ ಸಂಸತ್ ಗ್ರಂಥಾಲಯದಲ್ಲಿ ಸಭೆ ಸೇರಿದ್ದವು.

ADVERTISEMENT

ಮೂರು ತಾಸುಗಳ ಚರ್ಚೆಯ ನಂತರ ಜಂಟಿ ಹೇಳಿಕೆ ನೀಡಿದ ವಿರೋಧ ಪಕ್ಷಗಳು, ದೇಶದ ಭದ್ರತೆಯಂತಹ ಸೂಕ್ಷ್ಮ ವಿಷಯವನ್ನು ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ನಡೆದ ಪೈಶಾಚಿಕ ದಾಳಿಯನ್ನು ಖಂಡಿಸಿದ ವಿಪಕ್ಷ ನಾಯಕರು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ವಾಯುಸೇನೆ ನಡೆಸಿದ ವೈಮಾನಿಕ ದಾಳಿಯನ್ನು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮುಕ್ತಕಂಠದಿಂದ ಶ್ಲಾಘಿಸಿದರು.

ಯಶಸ್ವಿಯಾಗಿ ಉಗ್ರರ ಅಡಗುತಾಣ ಧ್ವಂಸಗೊಳಿಸಿದ ಶ್ರೇಯ ಭಾರತೀಯ ಸೇನೆಗೆ ಸಲ್ಲಬೇಕು. ವಿರೋಧ ಪಕ್ಷಗಳು ಸದಾ ಸೇನೆಯ ಬೆಂಬಲಕ್ಕೆ ಇರುತ್ತವೆ ಎಂದು ಹೇಳಿದರು.

ಇಂತಹ ಸಂದರ್ಭದಲ್ಲಿ ಪ್ರಧಾನಿಯು ಸರ್ವಪಕ್ಷಗಳ ಸಭೆ ಕರೆಯುವುದು ಸಂಪ್ರದಾಯ. ಆದರೆ, ನರೇಂದ್ರ ಮೋದಿ ಅವರು ಉದ್ದೇಶಪೂರ್ವಕವಾಗಿ ಆ ಸಂಪ್ರದಾಯ ಮುರಿದಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಎ.ಕೆ. ಆಂಟನಿ, ಗುಲಾಂ ನಬಿ ಆಜಾದ್‌, ಅಹ್ಮದ್‌ ಪಟೇಲ್‌, ಶರದ್‌ ಪವಾರ್‌, ಚಂದ್ರಬಾಬು ನಾಯ್ಡು, ಮಮತಾ ಬ್ಯಾನರ್ಜಿ, ಶರದ್‌ ಯಾದವ್‌, ಸೀತಾರಾಂ ಯೆಚೂರಿ ಸೇರಿದಂತೆ 21 ಪಕ್ಷಗಳ ಮುಖಂಡರು
ಭಾಗವಹಿಸಿದ್ದರು.

ನ್ಯಾಶನಲ್‌ ಕಾನ್ಫರೆನ್ಸ್‌ ಮತ್ತು ಸಮಾಜವಾದಿ ಪಕ್ಷದ ನಾಯಕರು ಭಾಗವಹಿಸಿರಲಿಲ್ಲ. ಪಾಕಿಸ್ತಾನದ ವಶದಲ್ಲಿರುವ ಭಾರತದ ಪೈಲಟ್‌ ಸುರಕ್ಷತೆಯ ಬಗ್ಗೆ ಎಲ್ಲ ನಾಯಕರು ಕಳವಳ ವ್ಯಕ್ತಪಡಿಸಿದರು.

ದೇಶದಲ್ಲಿ ಆತಂಕಕಾರಿ ಸ್ಥಿತಿ ಮನೆ ಮಾಡಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸುವ ನಿರ್ಧಾರ ಕೈಬಿಟ್ಟಿರುವುದಾಗಿ ಈ ನಾಯಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.