ಇಂಡಿಗೊ ವಿಮಾನ (ಸಂಗ್ರಹ ಚಿತ್ರ)
ನವದೆಹಲಿ: ರಾಜಧಾನಿ ನವದೆಹಲಿಯಲ್ಲಿ ದಟ್ಟ ಮಂಜು ಆವರಿಸಿದ್ದು, ಗೋಚರತೆ ಪ್ರಮಾಣ ಕುಸಿದಿದ್ದರಿಂದ 100ಕ್ಕೂ ಅಧಿಕ ವಿಮಾನಗಳ ಸಂಚಾರ ವಿಳಂಬವಾಗಿದೆ.
ಹಲವು ವಿಮಾನಗಳ ಸಮಯ ಬದಲಾವಣೆ ಮತ್ತು ರದ್ದು ಮಾಡಿರುವ ಬಗ್ಗೆಯೂ ವರದಿಯಾಗಿದೆ.
‘ಕಡಿಮೆ ಗೋಚರತೆ ಮತ್ತು ದಟ್ಟ ಮಂಜು ಆವರಿಸಿರುವುದು ವಿಮಾನಗಳ ಹಾರಾಟ ವಿಳಂಬಕ್ಕೆ ಕಾರಣವಾಗಿದೆ. ಹವಾಮಾನ ಕುರಿತಂತೆ ನಾವು ನಿಕಟ ಮೇಲ್ವಿಚಾರಣೆ ನಡೆಸುತ್ತಿದ್ದು, ಪ್ರಯಾಣಿಕರನ್ನು ನಿಗದಿತ ಪ್ರದೇಶಗಳಿಗೆ ತಲುಪಿಸಲು ಪ್ರಯತ್ನ ಮಾಡುತ್ತಿದ್ದೇವೆ’ಎಂದು ಇಂಡಿಗೊ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಲ್ಯಾಂಡಿಂಗ್ ಮತ್ತು ಟೇಕಾಫ್ ಮುಂದುವರಿದಿದೆ. ಆದರೆ, CAT IIIಗೆ (ಮಳೆ, ದಟ್ಟಮಂಜು ಅಥವಾ ಹಿಮದ ಸಮಯದಲ್ಲಿ ಗೋಚರತೆ 50 ಮೀ ಇದ್ದರೂ ವಿಮಾನವನ್ನು ಇಳಿಸಲು ಅನುವು ಮಾಡಿಕೊಡುವ ಸಾಧನ) ಒಳಪಡದ ವಿಮಾನಗಳ ಸಂಚಾರದಲ್ಲಿ ಮಾತ್ರ ವ್ಯತ್ಯವಾಗಿದೆ ಎಂದು ದೆಹಲಿ ವಿಮಾನ ನಿಲ್ದಾಣ ಕಾರ್ಯಾಚರಣೆ ನೋಡಿಕೊಳ್ಳುವ ಡಿಐಎಎಲ್ ಹೇಳಿದೆ.
‘ಪ್ರಯಾಣಿಕರು ವಿಮಾನಗಳ ಸಂಚಾರ ಕುರಿತ ಮಾಹಿತಿಗಾಗಿ ಸಂಬಂಧಿಸಿದ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ವಿನಂತಿಸಲಾಗಿದೆ. ಆಗಿರುವ ಯಾವುದೇ ಅನಾನುಕೂಲತೆಗಾಗಿ ತೀವ್ರವಾಗಿ ವಿಷಾದಿಸುತ್ತೇವೆ’ ಎಂದು ದೆಹಲಿಯ ಅಂತರರಾಷ್ಟ್ರೀಯ ವಿಮಾನನಿಲ್ದಾಣ ನಿಯಮಿತ (ಡಿಐಎಎಲ್) ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿರುವ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿದಿನ ಸುಮಾರು 1,300 ವಿಮಾನಗಳ ಕಾರ್ಯಾಚರಣೆ ನಡೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.