ನವದೆಹಲಿ: ವಿವಾಹಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು ಎಂಬ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಸೂಚನೆಯನ್ನು ಪಾಲಿಸಬೇಕು ಎಂದು ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಬುಧವಾರ ಆದೇಶ ನೀಡಿದೆ.
ವಿವಾಹಿತರು ಯಾವ ಧರ್ಮಕ್ಕೇ ಸೇರಿರಲಿ, ಅವರ ವಿವಾಹವನ್ನು ನೋಂದಣಿ ಮಾಡಿಸಬೇಕು ಎಂದು ಸುಪ್ರೀಂ ಕೋರ್ಟ್ 2006ರಲ್ಲಿ ನೀಡಿರುವ ತೀರ್ಪು ಈವರೆಗೂ ಅನುಷ್ಠಾನಕ್ಕೆ ಬಂದಿಲ್ಲದಿರುವುದು ಜುಗುಪ್ಸೆ ಮೂಡಿಸುವಂತಿದೆ ಎಂದು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ ರಾವ್ ಗೆಡೆಲಾ ಅವರು ಇರುವ ವಿಭಾಗೀಯ ಪೀಠವು ಹೇಳಿತು.
ಮದುವೆಗಳ ನೋಂದಣಿಯ ಕೇಂದ್ರೀಕೃತ ದತ್ತಾಂಶಕೋಶ ರಚಿಸಲು ನಿಯಮ ಸಿದ್ಧಪಡಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚಿಸಬೇಕು ಎಂಬ ಕೋರಿಕೆ ಇರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್, ಎರಡೂ ಸರ್ಕಾರಗಳಿಗೆ ನೋಟಿಸ್ ಜಾರಿಗೊಳಿಸಿದೆ.
ವಿವಾಹ ನೋಂದಣಿ ವಿಚಾರವಾಗಿ 2006ರ ಫೆಬ್ರುವರಿಯಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಈ ಬಗ್ಗೆ ಮೂರು ತಿಂಗಳಲ್ಲಿ ನಿಯಮ ರೂಪಿಸಿ ಅಧಿಸೂಚನೆಯಲ್ಲಿ ಪ್ರಕಟಿಸಬೇಕು ಎಂದು ಕೇಂದ್ರ ಸರ್ಕಾರ ಹಾಗೂ ಎಲ್ಲ ರಾಜ್ಯ ಸರ್ಕಾರಗಳಿಗೆ ಹೇಳಿತ್ತು.
ಕೋರ್ಟ್ ತೀರ್ಪಿನ ನಂತರ ದೆಹಲಿ ಸರ್ಕಾರವು 2014ರ ಏಪ್ರಿಲ್‌ನಲ್ಲಿ, ವಿವಾಹದ ಕಡ್ಡಾಯ ನೋಂದಣಿಗೆ ಆದೇಶ ಹೊರಡಿಸಿತ್ತು. ಆದರೆ, ಇದರಲ್ಲಿ ಹಲವು ಲೋಪಗಳಿವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಸುಪ್ರೀಂ ಕೋರ್ಟ್ ಬಯಸಿದಂತಹ ಸೂಕ್ತವಾದ ಕಾನೂನು ಇಲ್ಲದಿರುವ ಕಾರಣ, ವಿವಾಹ ನೋಂದಣಿಗೆ ಇರುವ ವ್ಯವಸ್ಥೆಯು ಸಮರ್ಪಕವಾಗಿಲ್ಲ, ಅದು ನೋಂದಣಿ ಮಾಡಿಸಲು ಬಯಸುವವರಿಗೆ ಕಷ್ಟಕೊಡುವಂತಿದೆ ಎಂದು ಅರ್ಜಿದಾರ ಆಕಾಶ್ ಗೋಯಲ್ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.