ನವದೆಹಲಿ: ಪೋಕ್ಸೊ ಪ್ರಕರಣವೊಂದರ ಆರೋಪಿ ಮೇಲಿನ ಎಫ್‌ಐಆರ್ ರದ್ದುಗೊಳಿಸಿರುವ ದೆಹಲಿ ಹೈಕೋರ್ಟ್, ಆರೋಪಿಯು ಲೋಕ ನಾಯಕ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಯಲ್ಲಿ 1 ತಿಂಗಳವರೆಗೆ ಸಮುದಾಯ ಸೇವೆ ಸಲ್ಲಿಸಬೇಕು. ಜೊತೆಗೆ ಗಾಯಗೊಂಡ ಸೈನಿಕರ ಅಭಿವೃದ್ಧಿ ನಿಧಿಗೆ ₹50 ಸಾವಿರ ನೀಡಬೇಕು ಎಂದು ನಿರ್ದೇಶಿಸಿದೆ.
ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಯಾಗಿದ್ದ ಆರೋಪಿಯು ಮತ್ತು ಸಂತ್ರಸ್ತೆಯು ಪ್ರೇಮಿಸುತ್ತಿದ್ದರು. ₹6 ಸಾವಿರ ನೀಡು, ಇಲ್ಲವಾದಲ್ಲಿ ನಿನ್ನ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಆರೋಪಿಯು ಸಂತ್ರಸ್ತೆಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ‘ಪ್ರೇಮ ಸಂಬಂಧದಲ್ಲಿ ಖಾಸಗಿ ಫೋಟೊಗಳನ್ನು ವಿನಿಮಯ ಮಾಡಿಕೊಳ್ಳುವುದು’ ಎಂದು ವಿಚಾರಣೆಯ ವೇಳೆ ಆರೋಪಿಯು ಹೇಳಿದ್ದರು.
2017ರಲ್ಲಿ ಈ ಘಟನೆ ನಡೆದಿತ್ತು. 2018ರಿಂದ ಬೆದರಿಕೆ ಒಡ್ಡುತ್ತಾ, ಹಲವು ತಿಂಗಳ ಕಾಲ ಆರೋಪಿಯು ಹಣ ಪಡೆದುಕೊಂಡಿದ್ದ. ಕೆಲವು ತಿಂಗಳ ಬಳಿಕ ಆತನ ಸ್ನೇಹಿತರೂ ಸಂತ್ರಸ್ತೆಗೆ ಬ್ಲ್ಯಾಕ್‌ಮೇಲ್ ಮಾಡಿದ್ದರು. ಭಯದ ಕಾರಣ, ಸಂತ್ರಸ್ತೆ ಇವರಿಗೂ ಹಣ ನೀಡಿದ್ದಾರೆ. 2019ರಲ್ಲಿ ಆರೋಪಿಯ ಮೇಲೆ ಎಫ್‌ಐಆರ್ ದಾಖಲಾಗಿತ್ತು.
‘ಈ ಘಟನೆಯಿಂದ ನಾನು ಹೊರಬರಬೇಕು. ಈ ಪ್ರಕರಣ ಹೀಗೆ ಮುಂದುವರಿದರೆ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ನನಗೆ ಒತ್ತಡವಾಗುತ್ತದೆ. ನನ್ನ ಮದುವೆಗೆ ಕೂಡ ತೊಂದರೆಯಾಗುತ್ತದೆ ಎಂದು ಸಂತ್ರಸ್ತೆ ಹೇಳಿದ್ದಾರೆ. ಜೊತೆಗೆ, ಆಕೆಯ ಖಾಸಗಿ ಫೋಟೊಗಳು ನನ್ನ ಬಳಿ ಇಲ್ಲ ಎಂದು ಆರೋಪಿ ಹೇಳಿದ್ದಾನೆ. ಆದ್ದರಿಂದ ಎಫ್‌ಐಆರ್ ಅನ್ನು ರದ್ದು ಮಾಡಲಾಗುತ್ತಿದೆ’ ಎಂದು ನ್ಯಾಯಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.