ADVERTISEMENT

ಪ್ರಿಯಾಂಕಾರಿಂದ ಪೇಂಟಿಂಗ್ ಖರೀದಿಗೆ ಒತ್ತಡ: ಯೆಸ್ ಸಹ ಸಂಸ್ಥಾಪಕ ರಾಣಾ ಕಪೂರ್‌

ಪಿಟಿಐ
Published 24 ಏಪ್ರಿಲ್ 2022, 16:25 IST
Last Updated 24 ಏಪ್ರಿಲ್ 2022, 16:25 IST
ರಾಣಾ ಕಪೂರ್, ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ
ರಾಣಾ ಕಪೂರ್, ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ   

ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಂದ ಎಂ.ಎಫ್. ಹುಸೇನ್ ಪೇಂಟಿಂಗ್ ಖರೀದಿಸುವಂತೆ ತಮ್ಮ ಮೇಲೆ ಒತ್ತಡ ಹೇರಲಾಗಿತ್ತು ಎಂದು ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್ ಅವರು ಜಾರಿ ನಿರ್ದೇಶನಾಲಯದ(ಇ.ಡಿ) ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಣಾ ಕಪೂರ್ ಅವರ ಹೇಳಿಕೆಯನ್ನು ಒಳಗೊಂಡ ದೋಷಾರೋಪ ಪಟ್ಟಿಯನ್ನು ಇ.ಡಿ ಅಧಿಕಾರಿಗಳು ಮುಂಬೈನಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ.

'ನನ್ನ ಮೇಲೆ ಪ್ರಿಯಾಂಕಾ ಗಾಂಧಿ ಅವರಿಂದ ಎಂ.ಎಫ್ ಹುಸೇನ್ ಪೇಂಟಿಂಗ್ ಅನ್ನು ಖರೀದಿಸುವಂತೆ ಬಲವಂತಪಡಿಸಲಾಗಿತ್ತು. ಒಂದು ವೇಳೆ ಇದಕ್ಕೆ ನಾನು ನಿರಾಕರಿಸಿದರೆ, ಸೋನಿಯಾ ಗಾಂಧಿ ಅವರ ಜತೆಗಿನ ಉತ್ತಮ ಸಂಬಂಧಕ್ಕೆ ಅಡ್ಡಿಯಾಗುವುದಷ್ಟೇ ಅಲ್ಲದೆ, 'ಪದ್ಮ ಭೂಷಣ' ಪುರಸ್ಕಾರದಿಂದಲೂ ವಂಚಿತರಾಗಬೇಕಾಗುತ್ತದೆ ಎಂದು ಆಗಿನ ಪೆಟ್ರೋಲಿಯಂ ಸಚಿವ ಮುರಳಿ ದೇವರಾ ಅವರು ನನಗೆ ತಿಳಿಸಿದ್ದರು. ಅಲ್ಲದೆ ಈ ಪೇಂಟಿಂಗ್ ಖರೀದಿಯಿಂದ ಬಂದಿದ್ದ ಹಣವನ್ನು ನ್ಯೂಯಾರ್ಕ್‌ನಲ್ಲಿ ಸೋನಿಯಾ ಗಾಂಧಿ ಅವರ ಚಿಕಿತ್ಸೆಗಾಗಿ ಬಳಸಲಾಗಿತ್ತು' ಎಂದು ಕಪೂರ್ ಹೇಳಿದ್ದಾರೆ.

ADVERTISEMENT

‘ಸೋನಿಯಾ ಗಾಂಧಿ ಅವರ ವೈದ್ಯಕೀಯ ಚಿಕಿತ್ಸೆಗಾಗಿ ಸೂಕ್ತ ಸಮಯದಲ್ಲಿ ಬೆಂಬಲಿಸುವಂತೆ ಸೋನಿಯಾ ಅವರ ಅತ್ಯಾಪ್ತರಾಗಿದ್ದ ಅಹ್ಮದ್ ಪಟೇಲ್ ಅವರು ನನಗೆ ಹೇಳಿದ್ದರು. ಕುಟುಂಬದ ಒಳಿತಿಗಾಗಿ ನಾನು ನೆರವಾಗಿದ್ದೆ. ಪದ್ಮ ಭೂಷಣ ಪುರಸ್ಕಾರಕ್ಕೆ ಇದನ್ನು ಪರಿಗಣಿಸಲಾಗಿತ್ತು’ ಎಂದು ಕಪೂರ್ ಹೇಳಿದ್ದಾರೆ ಎನ್ನಲಾಗಿದೆ.

ಬಿಜೆಪಿ ಟೀಕೆ:ರಾಣಾ ಕಪೂರ್ ಆರೋಪವನ್ನು ಆಧಾರವಾಗಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ, ಸುಲಿಗೆಕೋರರಾದ ಕಾಂಗ್ರೆಸ್ ಮತ್ತು ಗಾಂಧಿಗಳು 'ಪದ್ಮ ಭೂಷಣ' ಪುರಸ್ಕಾರದ ಮಾರಾಟದಲ್ಲಿ ತೊಡಗಿಸಿಕೊಂಡಿದ್ದರು ಎಂದು ದೂರಿದೆ.

ಸೇಡಿನ ರಾಜಕೀಯ:ಕಪೂರ್ ಅವರ ಈ ಹೇಳಿಕೆಯನ್ನು ರಾಜಕೀಯ ಸೇಡು ಎಂದು ಕಾಂಗ್ರೆಸ್ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.