ADVERTISEMENT

ಕಂಪ್ಯೂಟರ್‌ ಮುಂದೆ ತಪ್ಪಾದ ಭಂಗಿಯಲ್ಲಿ ಕುಳಿತರೆ ಬೆನ್ನು ಮೂಳೆಗೆ ಗಾಯ: ಸಂಶೋಧನೆ

ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊ ಯೂನಿವರ್ಸಿಟಿ ಸಂಶೋಧನೆಯಲ್ಲಿ ದೃಢ

ಪಿಟಿಐ
Published 6 ಜನವರಿ 2019, 13:34 IST
Last Updated 6 ಜನವರಿ 2019, 13:34 IST
   

ವಾಷಿಂಗ್ಟನ್‌: ಕಂಪ್ಯೂಟರ್‌ ಮುಂದೆ ಕೆಲಸ ಮಾಡುವಾಗ ಅಸಮರ್ಪಕ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ಮಾಂಸಖಂಡಗಳ ಸ್ನಾಯು ಸೆಳೆತ ಹೆಚ್ಚಾಗುತ್ತದೆ. ಕ್ರಮೇಣ ಅದು ಬೆನ್ನು ಮೂಳೆ ಗಾಯಕ್ಕೂ ಕಾರಣವಾಗುತ್ತದೆ ಎನ್ನುವುದು ಸಂಶೋಧನೆಯಲ್ಲಿ ದೃಢಪಟ್ಟಿದೆ.

ಸರಿಯಾಗಿ ಕುಳಿತಿರದ ಭಂಗಿಯು ಕುತ್ತಿಗೆಯನ್ನು ಅತ್ತಿತ್ತ ತಿರುಗಿಸುವ ಸಾಮರ್ಥ್ಯವನ್ನೇ ಕುಗ್ಗಿಸುತ್ತದೆ ಎನ್ನುತ್ತಾರೆ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊ ಯೂನಿವರ್ಸಿಟಿ ಸಂಶೋಧಕರು.

‘ಎತ್ತರದನಿಲುವಿನಲ್ಲಿ ಮತ್ತು ನೇರವಾಗಿ ಕುಳಿತುಕೊಂಡರೆ ಬೆನ್ನಿನ ಸ್ನಾಯುಗಳು ತಲೆಯ ಮತ್ತು ಕುತ್ತಿಗೆಯ ತೂಕ 5.44 ಕೆ.ಜಿಯಷ್ಟಿದ್ದರೂ (12 ಪೌಂಡು) ಸುಲಭವಾಗಿ ತಾಳಿಕೊಳ್ಳಬಲ್ಲವು. 45 ಡಿಗ್ರಿ ಕೋನದಲ್ಲಿ ತಲೆ ಮುಂದಕ್ಕೆ ಬಾಗುವಂತೆ ಕುಳಿತರೆ ಕುತ್ತಿಗೆಯೂ ಭಾರವಾದ ವಸ್ತು ಮೇಲೆತ್ತುವ ಮೀಟುಗೋಲು (ಲೀವರ್‌) ಮತ್ತು ಆಸರೆ ಬಿಂದುವಿನಂತೆ (ಫುಲ್ಕ್ರಮ್‌) ಕೆಲಸ ಮಾಡುತ್ತದೆ’ ಎನ್ನುತ್ತಾರೆ ಯೂನಿವರ್ಸಿಟಿಯ ಪ್ರೊಫೆಸರ್‌ ಎರಿಕ್‌ ಪೇಪರ್‌.

ADVERTISEMENT

‘ತಲೆ ಮತ್ತು ಕುತ್ತಿಗೆಯ ಸ್ನಾಯುವಿನ ತೂಕವು 20.41 ಕೆ.ಜಿಯಷ್ಟಿದ್ದರೆ (45 ಪೌಂಡ್‌) ಕಠಿಣವಾದ ಕುತ್ತಿಗೆ, ಭುಜ ಹಾಗೂ ಬೆನ್ನು ನೋವಿಗೆ ಒಳಗಾಗುವುದರಲ್ಲಿ ಅಚ್ಚರಿಪಡಬೇಕಿಲ್ಲ’ ಎನ್ನುತ್ತಾರೆ ಅವರು.

ಮೊದಲ ಹಂತದಲ್ಲಿ 87 ವಿದ್ಯಾರ್ಥಿಗಳು ಮತ್ತು ಎರಡನೇ ಹಂತದಲ್ಲಿ 125 ವಿದ್ಯಾರ್ಥಿಗಳಿಗೆ ತಮ್ಮ ತಲೆಗಳನ್ನು ನೇರವಾಗಿ ತಿರುಗಿಸುವಂತೆ ಹೇಳಿ, ಕುಳಿತುಕೊಳ್ಳುವ ಭಂಗಿಯು ತಲೆ ಮತ್ತು ಕುತ್ತಿಗೆ ಮೇಲೆ ಉಂಟು ಮಾಡುವ ಪರಿಣಾಮಗಳನ್ನು ಸಂಶೋಧಕರು ಪರೀಕ್ಷಿಸಿದ್ದಾರೆ.

‘ಕಂಪ್ಯೂಟರ್ ಸ್ಕ್ರೀನ್‌ ಮೇಲೆ ಅಕ್ಷರಗಳ ಗಾತ್ರ ಹೆಚ್ಚಿಸಿಕೊಳ್ಳುವುದು, ಕಂಪ್ಯೂಟರ್ ಓದುವ ಕನ್ನಡಕ ಧರಿಸುವುದು, ಕಣ್ಣಿಗೆ ಆಯಾಸವಾಗದಂತೆ ಓದಲು ಸುಲಭವಾಗುವ ಸ್ಕ್ರೀನ್‌ ಅನ್ನು ಕಂಪ್ಯೂಟರ್‌ನಲ್ಲಿ ಅಳವಡಿಸಿಕೊಳ್ಳುವುದು ಅಥವಾ ಕಣ್ಣಿನ ಮಟ್ಟಕ್ಕೆ ನಿಲುಕುವಂತೆ ಕಂಪ್ಯೂಟರ್‌ ಟೇಬಲ್‌ ಎತ್ತರಿಸುವುದು ಈ ಸಮಸ್ಯೆಗೆ ಪರಿಹಾರೋಪಾಯಗಳಾಗಿವೆ’ ಎಂದು ಎರಿಕ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.