ADVERTISEMENT

ಬಿಹಾರ, ಆಂಧ್ರಕ್ಕೆ ಟೋಪಿ ಹಾಕುವಲ್ಲಿ ಸಚಿವೆ ಯಶಸ್ವಿ: ಜೈರಾಮ್‌ ರಮೇಶ್‌

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 14:37 IST
Last Updated 30 ಜುಲೈ 2024, 14:37 IST
<div class="paragraphs"><p>ಜೈರಾಮ್‌ ರಮೇಶ್‌</p></div>

ಜೈರಾಮ್‌ ರಮೇಶ್‌

   

ನವದೆಹಲಿ: ‘ಬಿಹಾರ, ಆಂಧ್ರ ಪ್ರದೇಶಕ್ಕೆ ಬಜೆಟ್‌ನಲ್ಲಿ ದೊಡ್ಡ ಮೊತ್ತದ ಅನುದಾನ ಘೋಷಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿಕೊಂಡಿದ್ದಾರೆ. ಆದರೆ, ಈ ಆರ್ಥಿಕ ವರ್ಷದಲ್ಲಿಯೇ ಅನುದಾನ ಮಂಜೂರಾಗುವುದಿಲ್ಲ. ಹಲವು ವರ್ಷಗಳೇ ಆಗಬಹುದು. ನಿರ್ಮಲಾ ಅವರು ಈ ರಾಜ್ಯಗಳಿಗೆ ಟೋಪಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ‘ ಎಂದು ಕಾಂಗ್ರೆಸ್‌ ಹೇಳಿದೆ.

ಈ ಕುರಿತು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ. ‘ಈಗಾಗಲೇ ಕುಸಿತದ ಅಂಚಿನಲ್ಲಿರುವ ಬ್ಯಾಂಕೊಂದರ ಮುಂದಿನ ಯಾವುದೋ ದಿನಾಂಕ ನಮೂದಿಸಿದ ಚೆಕ್‌ ಅನ್ನು ನೀಡಿದ ಹಾಗೆ ಬಜೆಟ್‌ನಲ್ಲಿ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಅನುದಾನ ಘೋಷಿಸಲಾಗಿದೆ’ ಎಂದು ಲೇವಡಿ ಮಾಡಿದ್ದಾರೆ.

ADVERTISEMENT

‘ಈ ಎರಡೂ ರಾಜ್ಯಗಳಿಗೆ ದೊರಕುವ ಮೊತ್ತವು ₹20,000 ಕೋಟಿಯಿಂದ ₹30,000 ಕೋಟಿ ಮಾತ್ರ ಎಂಬ ಮಾಧ್ಯಮವೊಂದರ ವರದಿಯನ್ನು ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ನಮ್ಮ ಅತಿಮಾನುಷ ಪ್ರಧಾನಿ ಅವರ ‘ಕುರ್ಚಿ ಬಜಾವ್‌’ ಬಜೆಟ್‌ನಲ್ಲಿ ಬಿಹಾರಕ್ಕೆ ₹58,900 ಕೋಟಿ ನೀಡುವುದಾಗಿ ಹೇಳಲಾಗಿದೆ. ಆಂಧ್ರ ಪ್ರದೇಶದ ಪೊಲವರಂ ಯೋಜನೆಯ ಮೊದಲನೇ ಹಂತದ ನೀರಾವರಿ ಕಾಮಗಾರಿಗೆ ಸುಮಾರು ₹14,000 ಕೋಟಿ ನೀಡುವುದಾಗಿ ಕೇಂದ್ರ ಹೇಳಿದೆ. ಈ ನೀರಾವರಿ ಯೋಜನೆಯ ಪೂರ್ಣ ಹಣವನ್ನು ಕೇಂದ್ರವೇ ಭರಿಸುವುದಾಗಿ ಕೇಂದ್ರ ಸರ್ಕಾರವು ಈಗಾಗಲೇ ಹೇಳಿದೆ’ ಎಂದು ವಿವರಿಸಿದ್ದಾರೆ.

‘ಈ ಎರಡೂ ರಾಜ್ಯಗಳ ವಿವಿಧ ಯೋಜನೆಗಳಿಗೆ ಕೆಲವು ಲಕ್ಷ ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ. ಆದರೆ, ಈ ಎರಡೂ ರಾಜ್ಯಗಳಿಗಾಗಿ ಕೇಂದ್ರವು ಈ ವರ್ಷ ವೆಚ್ಚ ಮಾಡಲಿರುವ ಮೊತ್ತವು ₹20,000 ಕೋಟಿಯಷ್ಟೇ ಆಗಲಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.