ADVERTISEMENT

ಬಡ್ತಿ ಮೀಸಲಾತಿ: ಅಂತಿಮ ವಿಚಾರಣೆ 23ರಿಂದ

ಬಡ್ತಿ ಮೀಸಲಾತಿ ಪ್ರಕರಣದಲ್ಲಿ ಅಡಕಗೊಂಡ ವಿಷಯಗಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2018, 19:56 IST
Last Updated 12 ಅಕ್ಟೋಬರ್ 2018, 19:56 IST

ನವದೆಹಲಿ: ‘ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮ ಜ್ಯೇಷ್ಠತೆ ವಿಸ್ತರಿಸುವ’ ರಾಜ್ಯ ಸರ್ಕಾರದ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಬಿ.ಕೆ. ಪವಿತ್ರ ಮತ್ತಿತರರು ಸಲ್ಲಿಸಿರುವ ಮೇಲ್ಮನವಿಯ ಅಂತಿಮ ಹಂತದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಇದೇ 23ಕ್ಕೆ ನಿಗದಿಪಡಿಸಿದೆ.

‘ಕಾಯ್ದೆಯ ಅಗತ್ಯ, ಸಾಧಕ– ಬಾಧಕ ಮತ್ತು ಮಹತ್ವವನ್ನು ಪರಿಶೀಲಿಸಲು ಪ್ರಕರಣದ ಸಮಗ್ರ ವಿಚಾರಣೆ ನಡೆಸಲಾಗುವುದು’ ಎಂದು ನ್ಯಾಯಮೂರ್ತಿಗಳಾದ ಯು.ಯು. ಲಲಿತ್‌ ಹಾಗೂ ಕೆ.ಎಂ. ಜೋಸೆಫ್‌ ಅವರಿದ್ದ ಪೀಠ ಶುಕ್ರವಾರ ವಿಚಾರಣೆಯ ವೇಳೆ ತಿಳಿಸಿತು.

ಕಾಯ್ದೆಯ ಜಾರಿಗೆ ಯಾವುದೇ ಕ್ರಮ ಕೈಗೊಳ್ಳದೆ, ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು ಎಂದು ಅಡ್ವೋಕೇಟ್‌ ಜನರಲ್‌ ಉದಯ್‌ ಹೊಳ್ಳ ಅವರು ಈ ವರ್ಷದ ಜುಲೈ 27 ರಂದು ಪೀಠಕ್ಕೆ ಮೌಖಿಕ ಭರವಸೆ ನೀಡಿದ್ದರು. ಇದನ್ನು ಹಿಂತೆಗೆದುಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯ ಸರ್ಕಾರದ ಪರ ವಕೀಲ ಮುಕುಲ್ ರೋಹಟ್ಗಿ ತಿಳಿಸಿದರು.

ADVERTISEMENT

ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡದ ನ್ಯಾಯಪೀಠ, ‘ಈ ಕುರಿತು ನಾವು ಯಾವುದೇ ಆದೇಶ ನೀಡಲು ಬಯಸುವುದಿಲ್ಲ. ಬದಲಿಗೆ, ಅನೇಕ ವಿಷಯಗಳು ಅಡಕವಾಗಿರುವ ಈ ಪ್ರಕರಣದ ಸಮಗ್ರ ವಿಚಾರಣೆ ನಡೆಸಲಾಗುವುದು’ ಎಂದಷ್ಟೇ ತಿಳಿಸಿತು.

ಹಿಂದುಳಿದಿರುವಿಕೆ ಹಾಗೂ ಪ್ರಾತಿನಿಧ್ಯದ ಕೊರತೆಯನ್ನು ಪರಿಗಣಿಸಿ, ಅಂತಿಮ ತೀರ್ಪು ಹೊರಬರುವ ತನಕ ಕಾಯ್ದೆಯ ಮುಂದುವರಿಕೆಗೆ ನಿರ್ದೇಶನ ನೀಡಬೇಕು ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಪರ ವಕೀಲರಾದ ಇಂದಿರಾ ಜೈಸಿಂಗ್ ಮನವಿ ಮಾಡಿದರು. ಅಂತಿಮ ಹಂತದ ವಿಚಾರಣೆಯ ವೇಳೆ ಎಲ್ಲರ ವಾದಗಳನ್ನೂ ಆಲಿಸಲಾಗುವುದು ಎಂದು ನ್ಯಾಯಪೀಠ ತಿಳಿಸಿತು.

ರಾಜ್ಯದಲ್ಲಿ ಕಾಯ್ದೆಯ ಅನುಷ್ಠಾನ ಆಗದಿರುವುದರಿಂದ ಸಾಕಷ್ಟು ಸಮಸ್ಯೆಯಾಗಿದೆ. ಕಾಯ್ದೆ ಜಾರಿಯ ಅನಿವಾರ್ಯತೆಯೂ ಇದೆ ಎಂದು ರೋಹಟ್ಗಿ ಮನವರಿಕೆ ಮಾಡಲು ಪ್ರಯತ್ನಿಸಿದರು.

ಈ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲ ರಾಜೀವ್ಧವನ್ ಹಾಗೂ ಕಿರಣ್‌ ಸೂರಿ, ‘ಸುಪ್ರೀಂ ಕೋರ್ಟ್‌ ತೀರ್ಪನ್ನು ಕಡೆಗಣಿಸಲೆಂದೇ ರಾಜ್ಯ ಸರ್ಕಾರಗಳು ತಿದ್ದುಪಡಿ ಕಾಯ್ದೆ ಜಾರಿಗೊಳಿಸುತ್ತಿವೆ. ಅಂತಿಮ ತೀರ್ಪು ಪ್ರಕಟ ಆಗುವವರೆಗೆ ಬಡ್ತಿಯಲ್ಲಿ ಮೀಸಲಾತಿಗೆ ಅವಕಾಶ ನೀಡಬೇಕು ಎಂದು ಕೋರುತ್ತಿರುವುದೇ ಅತಾರ್ಕಿಕ’ ಎಂದರು.

‘ಸುಪ್ರೀಂ ಕೋರ್ಟ್‌ನ ತೀರ್ಪನ್ನು ದಮನಗೊಳಿಸುವ ಯಾವುದೇ ರೀತಿಯ ಕಾಯ್ದೆ ಜಾರಿಗೊಳಿಸಕೂಡದು’ ಎಂದು ಮದನ್‌ ಮೋಹನ್‌ ಪಾಠಕ್‌ ಪ್ರಕರಣಕ್ಕೆ (1978) ಸಂಬಂಧಿಸಿದಂತೆ ಏಳು ಜನ ಸದಸ್ಯರ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿದೆ ಎಂದೂ ಅವರು ಹೇಳಿದರು.

ಬಡ್ತಿಯಲ್ಲಿ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ತೀರ್ಪು ನೀಡಿರುವ ಸಾಂವಿಧಾನಿಕ ಪೀಠ, ಕೆನೆ ಪದರದ ತತ್ವ ಅಳವಡಿಸುವಂತೆ ಸೂಚಿಸಿದೆ. ಆ ಕುರಿತೂ ನ್ಯಾಯಪೀಠ ಈ ಪ್ರಕರಣವನ್ನು ಪರಿಗಣಿಸಬೇಕಿದೆ ಎಂದು ಅವರು ಆಗ್ರಹಿಸಿದರು.

‘ಬಡ್ತಿಯಲ್ಲಿ ಮೀಸಲಾತಿ ನೀಡುವ ರಾಜ್ಯ ಸರ್ಕಾರದ 2002ರ ಕಾಯ್ದೆಯನ್ನು ರದ್ದುಗೊಳಿಸಿ 2017ರ ಫೆಬ್ರುವರಿ 9ರಂದು ನೀಡಲಾದ ತೀರ್ಪನ್ನು ಸಮರ್ಪಕವಾಗಿ ಜಾರಿ ಮಾಡಿಲ್ಲ’ ಎಂದು ದೂರಿ ರಾಜ್ಯ ಸರ್ಕಾರದ ವಿರುದ್ಧ ಸಲ್ಲಿಸಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಈಗಾಗಲೇ ಇತ್ಯರ್ಥಪಡಿಸಲಾಗಿದೆ. ಕೋರ್ಟ್‌ನ ಮೌಖಿಕ ಆದೇಶದ ಪ್ರಕಾರ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದ್ದು, ಸರ್ಕಾರ ಈ ಕುರಿತು ಯಾವುದೇ ಭರವಸೆ ನೀಡಿಲ್ಲ ಎಂದು ಸರ್ಕಾರದ ಪರ ವಕೀಲ ಬಸವಪ್ರಭು ಪಾಟಿಲ ನ್ಯಾಯಪೀಠಕ್ಕೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.