ADVERTISEMENT

ಪುಲ್ವಾಮಾ ದಾಳಿಗೆ ಪ್ರತೀಕಾರ: ಯೋಜನೆ ನಿಖರ, ತಿರುಗೇಟು ನೇರ

ಯೋಧರ ಮೇಲೆ ಉಗ್ರರು ದಾಳಿ ನಡೆಸಿದ ದಿನದಿಂದಲೇ ಪ್ರತೀಕಾರದ ಲೆಕ್ಕಾಚಾರ ಶುರು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2019, 3:15 IST
Last Updated 27 ಫೆಬ್ರುವರಿ 2019, 3:15 IST
ನವದೆಹಲಿಯಲ್ಲಿ ಜನರ ಸಂಭ್ರಮ
ನವದೆಹಲಿಯಲ್ಲಿ ಜನರ ಸಂಭ್ರಮ   

ನವದೆಹಲಿ: ಭಾರತೀಯ ವಾಯುಪಡೆಯ ಪಶ್ಚಿಮ ವಲಯದ ಹಲವು ನೆಲೆಗಳಲ್ಲಿ ಸೋಮವಾರ ರಾತ್ರಿ ಚಟುವಟಿಕೆಗಳು ಚುರುಕುಗೊಂಡವು. ಮಂಗಳವಾರ ಬೆಳಿಗ್ಗಿನ ಹೊತ್ತಿಗೆ 12 ಮಿರಾಜ್‌–2000 ಯುದ್ಧ ವಿಮಾನಗಳು ಪಾಕಿಸ್ತಾನದ ಬಾಲಾಕೋಟ್‌ನ ಜೈಷ್‌ ಎ ಮೊಹಮ್ಮದ್‌ ಶಿಬಿರದ ಮೇಲೆ ಬಾಂಬ್‌ ದಾಳಿ ನಡೆಸಿದವು.

ಪಂಜಾಬ್‌ನ ಆದಂಪುರದಿಂದ ಹಾರಾಟ ನಡೆಸಿದ ಮಿರಾಜ್‌ ವಿಮಾನಗಳ ಜತೆಗೆ ಇತರ ಯುದ್ಧ ವಿಮಾನಗಳೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. ಸುಖೊಯ್‌ 30 ವಿಮಾನಗಳು ಹಲ್ವಾರಾದಿಂದ ಹಾರಿದವು. ಆದರೆ ಇವುಗಳು ದಾಳಿಯಲ್ಲಿ ನೇರವಾಗಿ ಭಾಗಿಯಾಗಲಿಲ್ಲ.

ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆಗಳನ್ನು (ಅವಾಕ್ಸ್‌) ಹೊಂದಿರುವ ಬೆಂಬಲ ವಿಮಾನ ಹಿಂಡಾನ್‌ನಿಂದ ಹೊರಟಿತು. ಐಎಲ್‌–78 ಟ್ಯಾಂಕರ್‌ ವಿಮಾನಗಳು ಆಗ್ರಾದಿಂದ ಹಾರಿದವು. ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌ ಮತ್ತು ರಾಜಸ್ಥಾನದ ವಾಯುನೆಲೆಗಳಿಂದ ಇತರ ಹಲವು ವಿಮಾನಗಳು ಜತೆಯಾದವು ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ADVERTISEMENT

ಮಿರಾಜ್‌ ವಿಮಾನಗಳು ನೆರೆ ದೇಶದ ಸೇನೆಯ ಕಣ್ತಪ್ಪಿಸಿಕೊಳ್ಳುವುದಕ್ಕಾಗಿಯೇ ಈ ಎಲ್ಲ ವಿಮಾನಗಳು ಹಾರಾಟ ನಡೆಸಿದ್ದವು. ರೇಡಾರ್‌ಗಳ ಕಣ್ಣಿಗೆ ಬೀಳದಂತೆ ಮಿರಾಜ್‌ಗಳು ಬಹಳ ಕೆಳಭಾಗದಲ್ಲಿಯೇ ಹಾರಿದವು.

ನಿಯಂತ್ರಣ ರೇಖೆಯಿಂದ ಸುಮಾರು 60 ಕಿ.ಮೀ. ದೂರದ ಬಾಲಾಕೋಟ್‌ನ ಜೆಇಎಂ ಶಿಬಿರದಲ್ಲಿ 6–7 ಬ್ಯಾರಕ್‌ಗಳಿದ್ದವು. ಸಾಮಾನ್ಯವಾಗಿ ಅಲ್ಲಿ 160 ಮಂದಿ ಉಗ್ರರು ಇರುತ್ತಿದ್ದರು. ದಾಳಿ ನಡೆದಾಗ ಇನ್ನೂ ಹೆಚ್ಚಿನ ಉಗ್ರರು ಅಲ್ಲಿ ಇದ್ದಿರಬೇಕು ಎಂದು ಅಂದಾಜಿಸಲಾಗಿದೆ. ಪಾಕ್‌ ಆಕ್ರಮಿತ ಕಾಶ್ಮೀರದ ಶಿಬಿರಗಳಲ್ಲಿದ್ದ ಉಗ್ರರನ್ನು ಪುಲ್ವಾಮಾ ದಾಳಿಯ ಬಳಿಕ ಸ್ಥಳಾಂತರಿಸಲಾಗಿದೆ. ಹಾಗಾಗಿ ಬಾಲಾಕೋಟ್‌ ಶಿಬಿರದಲ್ಲಿದ್ದ ಉಗ್ರರ ಸಂಖ್ಯೆ ಹೆಚ್ಚು ಎನ್ನಲಾಗಿದೆ.

ಬಾಲಾಕೋಟ್‌ ಶಿಬಿರದಲ್ಲಿ ಉಗ್ರರಿಗೆ ಎಲ್ಲ ರೀತಿಯ ತರಬೇತಿ ನೀಡಲಾಗುತ್ತಿತ್ತು. ಪಾಕಿಸ್ತಾನದ ಸೇನೆ ಮತ್ತು ಗುಪ‍್ತಚರ ವಿಭಾಗ ಐಎಸ್‌ಐನ ಅಧಿಕಾರಿಗಳ ಉಸ್ತುವಾರಿಯಲ್ಲಿಯೇ ಈ ತರಬೇತಿ ನಡೆಯುತ್ತಿತ್ತು ಎಂಬ ಆರೋಪ ಇದೆ. ದಾಳಿಯ ಯೋಜನೆ ರೂಪಿಸುವಾಗ ಈ ಎಲ್ಲ ಅಂಶಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ. ಪುಲ್ವಾಮಾ ದಾಳಿಯ ಮರು ದಿನದಿಂದಲೇ ಪ್ರತೀಕಾರದ ಯೋಜನೆ ರೂಪಿಸುವಿಕೆ ಆರಂಭವಾಗಿತ್ತು.

ವಾಯುದಾಳಿಯ ಮೂಲಕ ತಕ್ಕ ಪ್ರತ್ಯುತ್ತರ ನೀಡಬಹುದು ಎಂಬ ಪ್ರಸ್ತಾವವನ್ನು ವಾಯುಪಡೆ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ಬಿ.ಎಸ್‌. ಧನೋಆ ಮುಂದಿಟ್ಟಿದ್ದರು. ಅದಕ್ಕೆ ಅನುಮೋದನೆಯೂ ದೊರೆತಿತ್ತು.

ಮುಂದಿನ ಹತ್ತು ದಿನ ಮಾಹಿತಿ ಸಂಗ್ರಹ ನಡೆಯಿತು. ಇದಕ್ಕಾಗಿ ಡ್ರೋನ್‌ಗಳನ್ನು ಬಳಸಲಾಗಿತ್ತು. ಉಪಗ್ರಹ ಮೂಲಕ ಮಾಹಿತಿ ಸಂಗ್ರಹಿಸಲಾಗಿತ್ತು.

ವಾಯುಪಡೆಯ ಒಂದನೇ ತುಕಡಿ ‘ಟೈಗರ್‌’ ಮತ್ತು ಏಳನೇ ತುಕಡಿ ‘ಬ್ಯಾಟಲ್‌ ಆ್ಯಕ್ಸಸ್‌’ ಅನ್ನು ಕಾರ್ಯಾಚರಣೆಗೆ ಆಯ್ಕೆ ಮಾಡಲಾಯಿತು. ಗ್ವಾಲಿಯರ್‌ ವಾಯುನೆಲೆಯಲ್ಲಿದ್ದ ಈ ತುಕಡಿಗಳನ್ನು ಕಳೆದ ವಾರವೇ ಆದಂಪುರಕ್ಕೆ ಕಳುಹಿಸಲಾಗಿತ್ತು. ವಾಯುದಾಳಿಗೆ ಎರಡು ದಿನ ಮುಂಚಿನವರೆಗೆ ಈ ತುಕಡಿಗಳು ಅಲ್ಲಿ ತಾಲೀಮು ನಡೆಸಿದ್ದವು. ಮಿರಾಜ್‌ ವಿಮಾನಗಳು ಪಾಕಿಸ್ತಾನದ ಭೂಪ್ರದೇಶದೊಳಕ್ಕೆ ಹೋಗಿವೆಯೇ ಅಥವಾ ಆಗಸದಿಂದ ನೆಲಕ್ಕೆ ಸಿಡಿಸಬಹುದಾದ ಕ್ಷಿಪಣಿ ಮತ್ತು ಲೇಸರ್‌ ನಿರ್ದೇಶಿತ ಶಸ್ತ್ರಾಸ್ತ್ರ ಬಳಕೆಯಾಗಿದೆಯೇ ಎಂಬುದನ್ನು ರಕ್ಷಣಾ ಸಚಿವಾಲಯದ ಮೂಲಗಳು ಬಹಿರಂಗ ಮಾಡಿಲ್ಲ. ಭಾರತದ ಗಡಿಯೊಳಗೆ ನಿಂತೇ ಬಾಲಾಕೋಟ್‌ಗೆ ದಾಳಿ ನಡೆಸಬಲ್ಲ ಸಾಮರ್ಥ್ಯವನ್ನು ಮಿರಾಜ್‌ಗಳು ಹೊಂದಿವೆ.

ಸುಲಭ ತುತ್ತಾದ ಉಗ್ರರು

ನವದೆಹಲಿ:ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಶಿಬಿರಗಳಲ್ಲಿ ಇದ್ದ ನೂರಾರು ಉಗ್ರರನ್ನು ಪುಲ್ವಾಮಾ ದಾಳಿಯ ಬಳಿಕ ಬಾಲಾಕೋಟ್‌ನ ಅರಣ್ಯದ ನಡುವೆ ಇದ್ದ ಪಂಚತಾರಾ ರಿಸಾರ್ಟ್‌ ಮಾದರಿಯ ಶಿಬಿರಕ್ಕೆ ಸ್ಥಳಾಂತರಿಸಲಾಗಿತ್ತು. ಹಾಗಾಗಿ ವಾಯುಪಡೆಯ ದಾಳಿಗೆ ಈ ಉಗ್ರರು ಸುಲಭ ತುತ್ತಾದರು. ಸುಮಾರು 350 ಉಗ್ರರು ಬಲಿಯಾದರು ಎಂದು ಮೂಲಗಳು ಹೇಳಿವೆ.

ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ಅತ್ಯಂತ ದೊಡ್ಡ ಶಿಬಿರ ಇದಾಗಿತ್ತು. ಇಲ್ಲಿ ಕನಿಷ್ಠ 325 ಉಗ್ರರು, 25–27 ತರಬೇತಿದಾರರು ಇದ್ದರು. ದಾಳಿಯ ಸಂದರ್ಭದಲ್ಲಿ ಎಲ್ಲ ಉಗ್ರರು ಗಾಢ ನಿದ್ದೆಯಲ್ಲಿದ್ದರು.‍

ಪಾಕಿಸ್ತಾನದ ಸೇನೆಗೆ ಈ ದಾಳಿಯ ಸುಳಿವೇ ಇರಲಿಲ್ಲ. ಪುಲ್ವಾಮಾ ದಾಳಿಗೆ ಭಾರತದಿಂದ ಪ್ರತೀಕಾರ ಉಂಟಾಗಬಹುದು ಎಂಬ ಎಚ್ಚರಿಕೆಯಲ್ಲಿ ಪಾಕಿಸ್ತಾನ ಸೇನೆ ಇತ್ತು. ಆದರೆ, ನಿಯಂತ್ರಣ ರೇಖೆಯ ಸಮೀಪ, ಪಾಕ್‌ ಆಕ್ರಮಿತ ಪ್ರದೇಶದಲ್ಲಿರುವ ಶಿಬಿರಗಳ ಮೇಲೆ ಭಾರತ ನಿರ್ದಿಷ್ಟ ದಾಳಿ ನಡೆಸಬಹುದು ಎಂದು ಪಾಕಿಸ್ತಾನ ಅಂದುಕೊಂಡಿತ್ತು. ದೇಶದೊಳಕ್ಕೇ ಬಂದು ದಾಳಿ ನಡೆಸಬಹುದು ಎಂಬ ಅಂದಾಜು ಪಾಕಿಸ್ತಾನಕ್ಕೆ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ.

ತರಬೇತಿ ಪಡೆಯುತ್ತಿದ್ದ ಉಗ್ರರು ಮತ್ತು ಅವರ ತರಬೇತಿದಾರರನ್ನು ಬಾಲಾಕೋಟ್‌ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂಬ ಗುಪ್ತಚರ ಮಾಹಿತಿ ಭಾರತಕ್ಕೆ ಲಭ್ಯವಾಗಿತ್ತು. ಬಾಲಾಕೋಟ್‌ ಶಿಬಿರವು ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಕೇಂದ್ರ. ಇಲ್ಲಿ ಸ್ನಾನದ ಕೊಳದಂತಹ ಸೌಲಭ್ಯವೂ ಇದೆ.

ಇನ್ನಷ್ಟು ಓದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.