ನವದೆಹಲಿ: ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಇರುವ ವಸತಿ ನಿಲಯಗಳು ‘ಶೋಚನೀಯ’ ಸ್ಥಿತಿಯಲ್ಲಿವೆ. ಜೊತೆಗೆ, ಈ ಸಮುದಾಯಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳನ್ನು ತಡವಾಗಿ ನೀಡಲಾಗುತ್ತಿದೆ’ ಎಂಬುದಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
‘ಈ ಎರಡು ಬಹಳ ಮುಖ್ಯವಾದ ಸಮಸ್ಯೆಗಳನ್ನು ಬಗೆಹರಿಸಿ. ದೇಶದಲ್ಲಿರುವ ಶೇಕಡ 90ರಷ್ಟು ತಳಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಅವಕಾಶಗಳಿಗೆ ಈ ಸಮಸ್ಯೆಗಳು ಹಿನ್ನಡೆ ಮಾಡುತ್ತಿವೆ’ ಎಂದು ಪತ್ರದಲ್ಲಿ ಕೋರಿದ್ದಾರೆ.
‘ಮೊದಲನೆಯದಾಗಿ, ಇತ್ತೀಚೆಗೆ ನಾನು ಬಿಹಾರದ ದರ್ಬಾಂಗ್‌ನಲ್ಲಿರುವ ಅಂಬೇಡ್ಕರ್ ವಸತಿ ನಿಲಯಕ್ಕೆ ಭೇಟಿ ನೀಡಿದ್ದೆ. ಒಂದೇ ಕೊಠಡಿಯಲ್ಲಿ 6–7 ವಿದ್ಯಾರ್ಥಿಗಳನ್ನು ತುಂಬಲಾಗುತ್ತಿದೆ. ಶೌಚಾಲಯಗಳಲ್ಲಿ ಶುಚಿತ್ವವಿಲ್ಲ. ಕುಡಿಯುವ ನೀರು ಶುದ್ಧವಾಗಿಲ್ಲ. ಊಟದ ವ್ಯವಸ್ಥೆಯಂತೂ ಅವ್ಯವಸ್ಥೆಯಿಂದ ಕೂಡಿದೆ. ಗ್ರಂಥಾಲಯ ಮತ್ತು ಇಂಟರ್‌ನೆಟ್ ಸೌಲಭ್ಯವಿಲ್ಲ’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
‘ಎರಡನೆಯದಾಗಿ, ತಳಸಮುದಾಯಕ್ಕೆ ಸೇರಿದ ಮೆಟ್ರಿಕ್ ನಂತರ ವಿದ್ಯಾರ್ಥಿಗಳಿಗೆ ನಿಯಮಿತವಾಗಿ ವಿದ್ಯಾರ್ಥಿವೇತನ ದೊರಕುತ್ತಿಲ್ಲ. ಬಿಹಾರದಲ್ಲಂತೂ ವಿದ್ಯಾರ್ಥಿವೇತನ ಪೋರ್ಟಲ್ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. 2021–22ರಲ್ಲಿ ಯಾರಿಗೂ ವಿದ್ಯಾರ್ಥಿವೇತನ ದೊರೆತಿಲ್ಲ’ ಎಂದಿದ್ದಾರೆ.
ನಾನು ಬಿಹಾರದ ಉದಾಹರಣೆಯನ್ನು ನೀಡಿದ್ದೇನೆ. ಆದರೆ ಇದೇ ಸಮಸ್ಯೆಗಳು ದೇಶದಾದ್ಯಂತ ಇವೆ. ಆದ್ದರಿಂದ ಈ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರವು ತಕ್ಷಣವೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.– ರಾಹುಲ್ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.