ADVERTISEMENT

ಮತ್ತೆ ಕೆಲಸ ಬೇಕು ಎಂದು ‘ಸುಪ್ರೀಂ’ ಮೆಟ್ಟಿಲೇರಿದ ಮಾಜಿ ನ್ಯಾಯಾಧೀಶೆ

ನ್ಯಾಯಮೂರ್ತಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಮಹಿಳೆ

ಪಿಟಿಐ
Published 12 ಅಕ್ಟೋಬರ್ 2018, 17:24 IST
Last Updated 12 ಅಕ್ಟೋಬರ್ 2018, 17:24 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಿಸಿದ ನಂತರ ಹುದ್ದೆಗೆ ರಾಜೀನಾಮೆ ನೀಡಿದ್ದ ಗ್ವಾಲಿಯರ್‌ನ ಮಹಿಳಾ ನ್ಯಾಯಾಧೀಶರೊಬ್ಬರು ಮರಳಿ ಉದ್ಯೋಗ ಕೋರಿ ಸುಪ್ರೀಂ ಕೋರ್ಟ್
ಮೆಟ್ಟಿಲೇರಿದ್ದಾರೆ.

ತಮಗೆ ಬರಬೇಕಾದ ಬಾಕಿ ವೇತನ ಮತ್ತು ಸೇವಾ ಹಿರಿತನ ಕೋರಿ ಮಾಜಿ ನ್ಯಾಯಾಧೀಶೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮಧ್ಯಪ್ರದೇಶ ಹೈಕೋರ್ಟ್ ರಿಜಿಸ್ಟ್ರಾರ್‌ರಿಂದ ವಿವರಣೆ ಕೋರಿದೆ.

ಆರು ವಾರಗಳ ಒಳಗಾಗಿ ವಿವರಣೆ ನೀಡುವಂತೆ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಮತ್ತು ಅಶೋಕ್‌ ಭೂಷಣ್ ಅವರಿದ್ದ ಪೀಠವು ರಿಜಿಸ್ಟ್ರಾರ್‌ಗೆ ನೋಟಿಸ್‌ ನೀಡಿದೆ.

ADVERTISEMENT

ಪ್ರಕರಣದ ಹಿನ್ನೆಲೆ:ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್‌.ಕೆ.ಗಾಂಗ್ಲೆ ವಿರುದ್ಧ ಗ್ವಾಲಿಯರ್‌ನ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶೆ 2014ರಲ್ಲಿ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದರು.

ಈ ಪ್ರಕರಣ ಭಾರಿ ಸದ್ದು ಮಾಡುತ್ತಲೇ ನ್ಯಾಯಾಧೀಶೆಯನ್ನು ವರ್ಗಾವಣೆ ಮಾಡಲಾಯಿತು. ಬಳಿಕ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಈ ನಡುವೆ ನ್ಯಾಯಮೂರ್ತಿಗೆ ಛೀಮಾರಿ ಹಾಕುವ ನಿರ್ಣಯಕ್ಕೆ ರಾಜ್ಯಸಭೆಯ 50ಕ್ಕೂ ಹೆಚ್ಚು ಸದಸ್ಯರು ಸಹಿ ಹಾಕಿದ್ದರು.

ರಾಜ್ಯಸಭೆಯ ಅಂದಿನ ಸಭಾಪತಿ ಹಮೀದ್‌ ಅನ್ಸಾರಿ, ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆರ್‌. ಭಾನುಮತಿ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿ ರಚಿಸಿದ್ದರು.

ಲೈಂಗಿಕ ಕಿರುಕುಳ ಆರೋಪಗಳ ಬಗ್ಗೆ ತನಿಖೆ ನಡೆಸಿದ ಸಮಿತಿಯು 2017ರಲ್ಲಿ ರಾಜ್ಯಸಭೆಗೆ ವರದಿ ಸಲ್ಲಿಸಿತ್ತು. ನ್ಯಾಯಮೂರ್ತಿಯನ್ನು ದೋಷಮುಕ್ತಗೊಳಿಸಿತ್ತು.

ಈ ನಡುವೆ ನ್ಯಾಯಮೂರ್ತಿ ವಿರುದ್ಧ ರಾಷ್ಟ್ರಪತಿ, ಮಧ್ಯಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಾ ಧೀಶರಿಗೂ ದೂರು ಸಲ್ಲಿಸಲಾಗಿತ್ತು.

ಸುಪ್ರೀಂ ಕೋರ್ಟ್‌ನಲ್ಲಿ ಮಾಜಿ ನ್ಯಾಯಾಧೀಶೆ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ವಾದ ಮಂಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.