ADVERTISEMENT

ರೋಹಿಣಿ ಕೋರ್ಟ್: ವಕೀಲನ ಹತ್ಯೆಗೆ ಸ್ಕೆಚ್ ಹಾಕಿದ್ದ ಡಿಆರ್‌ಡಿಒ ವಿಜ್ಞಾನಿ ಬಂಧನ

ಪಿಟಿಐ
Published 18 ಡಿಸೆಂಬರ್ 2021, 11:18 IST
Last Updated 18 ಡಿಸೆಂಬರ್ 2021, 11:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಇಲ್ಲಿನ ರೋಹಿಣಿ ಜಿಲ್ಲಾ ನ್ಯಾಯಾಲಯದಲ್ಲಿ ಇದೇ ತಿಂಗಳು ನಡೆದಿದ್ದ ಕಡಿಮೆ ತೀವ್ರತೆಯ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಆರ್‌ಡಿಒ ವಿಜ್ಞಾನಿ ಭರತ್ ಭೂಷಣ್ ಕಟಾರಿಯಾ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಡಿ.9ರಂದು ದೆಹಲಿ ರೋಹಿಣಿ ಜಿಲ್ಲಾ ನ್ಯಾಯಾಲಯದ ಕೊಠಡಿ ಸಂಖ್ಯೆ 102ರಲ್ಲಿ ಸ್ಫೋಟ ಸಂಭವಿಸಿತ್ತು.

‘ಡಿಆರ್‌ಡಿಒನಲ್ಲಿ ಹಿರಿಯ ವಿಜ್ಞಾನಿಯಾಗಿರುವ ಭರತ್ ಭೂಷಣ್ ಕಟಾರಿಯಾ ಅವರು ವಕೀಲನಾಗಿರುವ ತಮ್ಮ ನೆರೆಮನೆಯಾತನನ್ನು ಕೊಲ್ಲುವ ಉದ್ದೇಶದಿಂದ ಟಿಫಿನ್ ಬಾಕ್ಸ್‌ನಲ್ಲಿ ಸ್ಫೋಟಕವನ್ನಿರಿಸಿ, ಅದನ್ನು ನ್ಯಾಯಾಲಯದ ಕೊಠಡಿಯೊಳಗೆ ಇಟ್ಟಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಸ್ಫೋಟ ನಡೆದ ದಿನ ಆರೋಪಿ ಬೆಳಿಗ್ಗೆ 9.33ಕ್ಕೆ ಕೋರ್ಟ್‌ನೊಳಗೆ ಬಂದಿದ್ದರು. ಅವರ ಕೈಗಳಲ್ಲಿ ಎರಡು ಬ್ಯಾಗ್‌ಗಳು ಇದ್ದವು. ಅದರಲ್ಲಿ ಒಂದು ಬ್ಯಾಗ್ ಅನ್ನು ಕೋರ್ಟ್‌ನ ಒಳಗಿಟ್ಟಿದ್ದ ಆರೋಪಿ 10.35ರ ವೇಳೆಗೆ ಅಲ್ಲಿಂದ ತೆರಳಿದ್ದರು’ ಎಂದು ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಆಸ್ಥಾನ ಮಾಹಿತಿ ನೀಡಿದ್ದಾರೆ.

‘ಡಿಆರ್‌ಡಿಒ ವಿಜ್ಞಾನಿ ಮತ್ತು ವಕೀಲ ಇಬ್ಬರೂ ಪರಸ್ಪರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇಬ್ಬರೂ ನೆರೆಹೊರೆಯವರಾಗಿದ್ದು, ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಮೇಲ್ನೋಟಕ್ಕೆ ವಿಜ್ಞಾನಿಯು ವಕೀಲರ ವಿರುದ್ಧ ದ್ವೇಷ ಹೊಂದಿದ್ದರು ಎಂಬುದು ತಿಳಿದು ಬಂದಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.