ADVERTISEMENT

ಶಬರಿಮಲೆ ಮಹಿಳೆ ಪ್ರವೇಶ ಮುಂದುವರಿದ ಪ್ರತಿಭಟನೆ

ಪಿಟಿಐ
Published 12 ಅಕ್ಟೋಬರ್ 2018, 18:09 IST
Last Updated 12 ಅಕ್ಟೋಬರ್ 2018, 18:09 IST
ಕೊಲ್ಲಂ ತುಳಸಿ
ಕೊಲ್ಲಂ ತುಳಸಿ   

ತಿರುವನಂತಪುರ:ಎಲ್ಲ ವಯಸ್ಸಿನ ಮಹಿಳೆಯರಿಗೂ ಶಬರಿಮಲೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿರುವ ಸುಪ್ರೀಂಕೋರ್ಟ್‌ಆದೇಶ ಪ್ರಶ್ನಿಸಿ, ರಾಜ್ಯ ಸರ್ಕಾರ ಪುನರ್‌ವಿಮರ್ಶೆ ಅರ್ಜಿ ಸಲ್ಲಿಸಬೇಕು ಎಂದು ಆಗ್ರಹಿಸಿ ಭಕ್ತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ, ವಿರೋಧ ಪಕ್ಷ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರು ಶುಕ್ರವಾರವೂ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ಸುಪ್ರೀಂ ಕೋರ್ಟ್‌ ಆದೇಶವನ್ನು ‘ರಾಜಕೀಕರಣ’ಗೊಳಿಸಲು ಯತ್ನಿಸಲಾಗುತ್ತದೆ ಎಂದು ಕೇರಳದ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಸರ್ಕಾರದ ಪ್ರಮುಖ ಮಿತ್ರ ಪಕ್ಷ ಸಿಪಿಐ ಆರೋಪಿಸಿದೆ.

‘ಪ್ರತಿಭಟನೆಯನ್ನು ಕೇರಳಕ್ಕಷ್ಟೆ ಸೀಮಿತಗೊಳಿಸುವುದಿಲ್ಲ ದಕ್ಷಿಣ ಭಾರತದ ಇತರ ರಾಜ್ಯಗಳಿಗೂ ವಿಸ್ತರಿಸಲಾಗುವುದು’ ಎಂದು ಬಿಜೆಪಿ ಹೇಳಿದೆ.

ADVERTISEMENT

‘ಎಲ್‌ಡಿಎಫ್‌ ಸರ್ಕಾರ ಆಸ್ತಿಕರ ವಿರೋಧಿಯಲ್ಲ. ಸುಪ್ರೀಂ ಕೋರ್ಟ್ ಆದೇಶ ಜಾರಿಗೊಳಿಸುವ ಬದ್ಧತೆ ಅದಕ್ಕಿದೆ’ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್‌ ಹೇಳಿದ್ದಾರೆ.

ತಿರುವಾಂಕೂರು ದೇವಸ್ವಂ ಮಂಡಳಿ ಕಚೇರಿ ಮುಂಭಾಗದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಕೆ. ಮುರಳೀಧರನ್‌, ‘ತೀರ್ಪನ್ನು ಪ್ರಶ್ನಸಿ ರಾಜ್ಯ ಸರ್ಕಾರ ಪುನರ್‌ವಿಮರ್ಶೆ ಅರ್ಜಿ ಸಲ್ಲಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಪಟ್ಟನಂತಿಟ್ಟ ಜಿಲ್ಲೆಯ ಪಂದಳಂನಿಂದ ಬಿಜೆಪಿ ಆರಂಭಿಸಿರುವ ರ್‍ಯಾಲಿ ಶುಕ್ರವಾರ ಕೊಲ್ಲಂ ಜಿಲ್ಲೆಗೆ ತಲುಪಿದ್ದು, ರ್‍ಯಾಲಿಯಲ್ಲಿ ಹಲವು ನಾಯಕರು ಪಾಲ್ಗೊಂಡಿದ್ದಾರೆ.

ಶಬರಿಮಲೆಯ ಹೆಸರಿನಲ್ಲಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಎಲ್‌ಡಿಎಫ್ ಆರೋಪಿಸಿದೆ.ತೀರ್ಪು ಪ್ರಶ್ನಿಸಿ ಪುನರ್‌ವಿಮರ್ಶೆ ಅರ್ಜಿ ಸಲ್ಲಿಸುವುದಿಲ್ಲ ಎಂದು ರಾಜ್ಯ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಿತ್ತು.

‘ಶಬರಿಮಲೆ ಪ್ರವೇಶಿಸುವ ಮಹಿಳೆಯರ ದೇಹವನ್ನು ಸೀಳಬೇಕು’

‘ಶಬರಿಮಲೆ ದೇವಾಲಯಕ್ಕೆ ಪ್ರವೇಶಿಸುವ ಮಹಿಳೆಯರ ದೇಹವನ್ನು ಎರಡು ಭಾಗವಾಗಿ ಸೀಳಬೇಕು’ ಎಂದು ಮಲಯಾಳಂ ಸಿನಿಮಾ ನಟ ಕೊಲ್ಲಂ ತುಳಸಿ ಹೇಳಿದ್ದಾರೆ.

ಕೊಲ್ಲಂ ಜಿಲ್ಲೆಯ ಚವರ ಎಂಬಲ್ಲಿ ನಡೆದ ವಿಶ್ವಾಸ ಸಂರಕ್ಷಣಾ ಜಾಥಾದಲ್ಲಿ ತುಳಸಿ ಈ ರೀತಿ ಗುಡುಗಿದ್ದಾರೆ. ‘ಶಬರಿಮಲೆಗೆ ಹೋಗುವ ಮಹಿಳೆಯರ ದೇಹವನ್ನು ಸೀಳಿ ಒಂದು ಭಾಗವನ್ನು ದೆಹಲಿಗೂ ಇನ್ನೊಂದುಭಾಗವನ್ನು ಪಿಣರಾಯಿ ವಿಜಯನ್ ಅವರ ಕೋಣೆಗೆ ಕಳಿಸಿಕೊಡಬೇಕು. ಮಹಿಳೆಯರಿಗೆ ಪ್ರವೇಶ ನೀಡಿದ ನ್ಯಾಯಮೂರ್ತಿಗಳು ಮೂಢರು’ ಎಂದು ತುಳಸಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.