ADVERTISEMENT

ನಿಕ್ಕಿ ಯಾದವ್ ಕೊಲೆ: ಸಾಹಿಲ್ ತಂದೆ ಸೇರಿ ಐವರ ಬಂಧನ

2020ರಲ್ಲೇ ಇಬ್ಬರು ವಿವಾಹವಾಗಿದ್ದರು ಎಂದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2023, 11:40 IST
Last Updated 18 ಫೆಬ್ರುವರಿ 2023, 11:40 IST
ನಿಕ್ಕಿ ಜತೆ ಸಾಹಿಲ್‌. ಚಿತ್ರ–ಪಿಟಿಐ
ನಿಕ್ಕಿ ಜತೆ ಸಾಹಿಲ್‌. ಚಿತ್ರ–ಪಿಟಿಐ   

ನವದೆಹಲಿ: ಸಹಜೀವನದ ಸಂಗಾತಿ ನಿಕ್ಕಿ ಯಾದವ್ ಕೊಲೆ ಮಾಡಿ ಫ್ರಿಜ್‌ನಲ್ಲಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಾಹಿಲ್ ಗೆಹಲೋತ್‌ ಅವರ ತಂದೆ ಸೇರಿ ಐವರನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ತಂದೆ ವೀರೇಂದ್ರ ಸಿಂಗ್, ಇಬ್ಬರು ಸೋದರ ಸಂಬಂಧಿಗಳಾದ ಆಶಿಶ್ ಮತ್ತು ನವೀನ್ ಹಾಗೂ ಸಾಹಿಲ್ ಗೆಹಲೋತ್‌ನ ಇಬ್ಬರು ಸ್ನೇಹಿತರಾದ ಅಮರ್ ಮತ್ತು ಲೋಕೇಶ್ ಸೇರಿದಂತೆ ಎಲ್ಲಾ ಐದು ಸಹ ಆರೋಪಿಗಳನ್ನು ಕೂಲಂಕಷವಾಗಿ ವಿಚಾರಣೆ ನಡೆಸಿ, ಹತ್ಯೆಗೆ ಸಂಬಂಧಿಸಿದಂತೆ ಅವರ ಪಾತ್ರ ಪರಿಶೀಲಿಸಿದ ನಂತರ ಬಂಧಿಸಲಾಗಿದೆ ಎಂದು ವಿಶೇಷ ಪೊಲೀಸ್ ಆಯುಕ್ತ (ಅಪರಾಧ) ರವೀಂದ್ರ ಯಾದವ್ ತಿಳಿಸಿದ್ದಾರೆ.

ದೆಹಲಿ ಪೊಲೀಸ್ ಕಾನ್‌ಸ್ಟೆಬಲ್‌ ಆಗಿರುವ ನವೀನ್, ಪ್ರಮುಖ ಆರೋಪಿ ಸಾಹಿಲ್ ಗೆಹಲೋತ್‌ ಅವರ ಸಂಬಂಧಿ. ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿರುವ ಗೆಹಲೋತ್‌ನನ್ನು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

ADVERTISEMENT

ನಿಕ್ಕಿ ಯಾದವ್ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದ ಕಾರಣ ಕೊಲೆ ಮಾಡಿರುವುದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

ಆದರೆ ಪೊಲೀಸರ ಪ್ರಕಾರ, ಇಬ್ಬರೂ 2020ರಲ್ಲೇ ವಿವಾಹ ಆಗಿದ್ದರು. ನಿಕ್ಕಿ ಯಾದವ್‌ ಸಾಹಿಲ್‌ನ ಪತ್ನಿಯೇ ಹೊರತು ಸಹಜೀವನದ ಸಂಗಾತಿ ಅಲ್ಲ ಎಂದು ವಿಶೇಷ ಆಯುಕ್ತರು ತಿಳಿಸಿದ್ದಾರೆ.

ಫೆ. 10ರಂದು ಸಾಹಿಲ್‌ಗೆ ಬೇರೆ ಮಹಿಳೆ ಜತೆ ವಿವಾಹ ನಿಶ್ಚಯ ಮಾಡಲಾಗಿತ್ತು. ಈ ವಿಚಾರವಾಗಿ ನಿಕ್ಕಿ ಮತ್ತು ಸಾಹಿಲ್ ನಡುವೆ ಗಲಾಟೆ ನಡೆದಿತ್ತು. ಮದುವೆಯಾಗದಂತೆ ಆಕೆ ಒತ್ತಡ ಹೇರಿದ್ದಳು. ಮನವೊಲಿಸಲು ಸಾಧ್ಯವಾಗದಿದ್ದಾಗ ನಿಕ್ಕಿಯನ್ನು ಕೊಲ್ಲುವ ಯೋಜನೆ ರೂಪಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಅದರಂತೆ ಸಾಹಿಲ್ ಗೆಹಲೋತ್‌ ಆಕೆಯನ್ನು ಕೊಲೆ ಮಾಡಿ, ಫೆ.10 ರಂದು ಸಹ ಆರೋಪಿಗಳಿಗೆ ವಿಷಯ ತಿಳಿಸಿದ. ನಂತರ ಅವರೆಲ್ಲರೂ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು ಎಂದು ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.