ADVERTISEMENT

UP Polls | ಫಲಿತಾಂಶದ ದಿನ ಬಿಜೆಪಿಗೆ ವಾಸ್ತವದ ಅರಿವಾಗಲಿದೆ: ಶಿವಪಾಲ್ ಯಾದವ್

'ಎಸ್‌ಪಿ ಮೈತ್ರಿಕೂಟಕ್ಕೆ 300ಕ್ಕಿಂತ ಹೆಚ್ಚು ಸ್ಥಾನ'

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2022, 16:19 IST
Last Updated 19 ಫೆಬ್ರುವರಿ 2022, 16:19 IST
ಪಿಎಸ್‌ಪಿ ಮುಖ್ಯಸ್ಥ ಶಿವಪಾಲ್ ಸಿಂಗ್ ಯಾದವ್ ಹಾಗೂ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್
ಪಿಎಸ್‌ಪಿ ಮುಖ್ಯಸ್ಥ ಶಿವಪಾಲ್ ಸಿಂಗ್ ಯಾದವ್ ಹಾಗೂ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್   

ಲಖನೌ: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ನೇತೃತ್ವದ ಮೈತ್ರಿಕೂಟವು 300ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿಗೆ ಫಲಿತಾಂಶದ ದಿನ ಈ ವಾಸ್ತವದ ಅರಿವಾಗಲಿದೆ ಎಂದು ಪ್ರಗತಿಶೀಲ ಸಮಾಜವಾದಿ ಪಕ್ಷದ(ಪಿಎಸ್‌ಪಿ) ಮುಖ್ಯಸ್ಥ ಶಿವಪಾಲ್ ಸಿಂಗ್ ಯಾದವ್ ಶನಿವಾರ ಅಭಿಪ್ರಾಯಪಟ್ಟಿದ್ದಾರೆ.

ಶಿವಪಾಲ್ ಅವರುಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಸಂಬಂಧಿಯೂ ಹೌದು.

ಇಟವಾ ಜಿಲ್ಲೆಯ ಜಸ್ವಂತನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಶಿವಪಾಲ್, 'ಎಸ್‌ಪಿ ಮೈತ್ರಿಕೂಟವು ಸಾಧ್ಯವಿರುವ ಎಲ್ಲ ಕ್ಷೇತ್ರಗಳಲ್ಲೂ ಜಯ ಕಾಣಲಿದೆ. ಬಿಜೆಪಿ ಪ್ರಯತ್ನ ಮಾಡಲಿದೆ. ಅದನ್ನು ಬಿಟ್ಟು ಬೇರೇನನ್ನೂ ಮಾಡಲಾರದು. ಮಾರ್ಚ್ 10ರಂದು ಫಲಿತಾಂಶ ಪ್ರಕಟವಾದ ಬಳಿಕ ಬಿಜೆಪಿಗೆ ವಾಸ್ತವದ ಅರಿವಾಗಲಿದೆ. ಈ ಮೈತ್ರಿಯು (ಎಸ್‌ಪಿ ಮೈತ್ರಿಯು) 300ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ADVERTISEMENT

ಜಸ್ವಂತನಗರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಯಾದವ್, ಈ ಕ್ಷೇತ್ರದಲ್ಲಿ ಬಿಜೆಪಿಯು ಹೀನಾಯವಾಗಿ ಸೋಲಲಿದೆ ಎಂದೂ ಹೇಳಿಕೊಂಡಿದ್ದಾರೆ.

'ನಾನುಜಸ್ವಂತನಗರ ಕ್ಷೇತ್ರದಲ್ಲಿ ಈ ವರೆಗೆ ಉತ್ತಮ ಮತ ಗಳಿಕೆ ಮಾಡಿದ್ದೇನೆ.2012ರಲ್ಲಿ1,33,000 ಮತ ಪಡೆದಿದ್ದೆ. 2017ರಲ್ಲಿ1,26,000 ವೋಟು ಗಳಿಸಿದ್ದೆ. ಇದೀಗ ಅವರು (ಬಿಜೆಪಿ) ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ನಾನು ಉತ್ತಮ ಸಂಖ್ಯೆಯ ಮತ ಪಡೆದು ಜಯ ಸಾಧಿಸಲಿದ್ದೇನೆ ಎಂಬ ಭರವಸೆ ಇದೆ' ಎಂದು ಹೇಳಿದ್ದಾರೆ.

ಅಖಿಲೇಶ್ ಯಾದವ್ ಅವರು ಕಣಕ್ಕಿಳಿದಿರುವ ಕರ್ಹಾಲ್ ಕ್ಷೇತ್ರದಿಂದಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಎಸ್.ಪಿ. ಸಿಂಗ್ ಬಘೇಲ್ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಈಕುರಿತಾಗಿಯೂ ಮಾತನಾಡಿರುವ ಶಿವಪಾಲ್,ಕರ್ಹಾಲ್ ಕ್ಷೇತ್ರದಲ್ಲಿ ಸ್ಪರ್ಧೆಯೇ ಇಲ್ಲ ಎಂದಿದ್ದಾರೆ. 'ಕರ್ಹಾಲ್ ಮತ್ತು ಜಸ್ವಂತನಗರ್ ವಿಧಾನಸಭೆ ಕ್ಷೇತ್ರಗಳ ಮತದಾರರ ನಡುವೆ ಇರುವ ಏಕೈಕ ಸ್ಪರ್ಧೆ ಎಂದರೆ, ನಮ್ಮಿಬ್ಬರಲ್ಲಿ ಒಬ್ಬರಿಗೆ ದೊಡ್ಡ ಅಂತರದ ಗೆಲುವು ತಂದುಕೊಡುವುದೇ ಆಗಿದೆ' ಎಂದಿದ್ದಾರೆ.

ಶಿವಪಾಲ್ ಯಾದವ್ ಅವರು 2016ರಲ್ಲಿ ಎಸ್‌ಪಿಯಿಂದ ಹೊರನಡೆದಿದ್ದರು. ನಂತರ ‍ಹೊಸ ಪಕ್ಷವನ್ನು (ಪಿಎಸ್‌ಪಿ) ಸ್ಥಾಪಿಸಿದ್ದರು.

403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಎರಡು ಹಂತದ (ಫೆಬ್ರುವರಿ 10 ಮತ್ತು 14ರಂದು) ಮತದಾನ ಈಗಾಗಲೇ ಮುಗಿದಿದೆ. ನಾಳೆ (ಫೆ.20) ಮೂರನೇ ಹಂತದ ಮತದಾನ ನಡೆಯಲಿದೆ. ಫೆಬ್ರುವರಿ 20, 23, 27, ಮಾರ್ಚ್‌ 3 ಮತ್ತು 7ರಂದು ಉಳಿದ ಹಂತಗಳ ಮತದಾನ ನಡೆಯಲಿದೆ.

ಮಾರ್ಚ್‌ 10 ರಂದು ಫಲಿತಾಂಶ ಪ್ರಕಟವಾಗಲಿದೆ.

2017ರ ಚುನಾವಣೆಯಲ್ಲಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಎಸ್‌ಪಿ 47, ಬಿಎಸ್‌ಪಿ 19 ಕ್ಷೇತ್ರಗಳಲ್ಲಿ ಜಯ ಕಂಡರೆ, ಕಾಂಗ್ರೆಸ್ ಕೇವಲ 7 ಕಡೆ ಖಾತೆ ತೆರೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.