ADVERTISEMENT

ರಾಜಧರ್ಮ ಪಾಲಿಸದ ಮೋದಿ: ನಾಯ್ಡು ಆಕ್ರೋಶ

ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ಉಪವಾಸ: ವೈಯಕ್ತಿಕ ವಾಗ್ದಾಳಿಯ ವಿರುದ್ಧ ಪ್ರಧಾನಿಗೆ ಎಚ್ಚರಿಕೆ

ಪಿಟಿಐ
Published 12 ಫೆಬ್ರುವರಿ 2019, 2:29 IST
Last Updated 12 ಫೆಬ್ರುವರಿ 2019, 2:29 IST
ಪ್ರತಿಭಟನೆ ಸಂದರ್ಭದಲ್ಲಿ ಫಾರೂಕ್‌ ಅಬ್ದುಲ್ಲಾ, ಚಂದ್ರಬಾಬು ನಾಯ್ಡು ಮತ್ತು ರಾಹುಲ್‌ ಗಾಂಧಿ ಪಿಟಿಐ ಚಿತ್ರ
ಪ್ರತಿಭಟನೆ ಸಂದರ್ಭದಲ್ಲಿ ಫಾರೂಕ್‌ ಅಬ್ದುಲ್ಲಾ, ಚಂದ್ರಬಾಬು ನಾಯ್ಡು ಮತ್ತು ರಾಹುಲ್‌ ಗಾಂಧಿ ಪಿಟಿಐ ಚಿತ್ರ   

ನವದೆಹಲಿ: ತಮ್ಮ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನಿರಾಕರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ರಾಜಧರ್ಮದಿಂದ ದೂರ ಸರಿದಿದ್ದಾರೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹರಿಹಾ‌‌ಯ್ದಿದ್ದಾರೆ.

ದೆಹಲಿಯ ಆಂಧ್ರ ಭವನದಲ್ಲಿ ನಾಯ್ಡು ಅವರು ಸೋಮವಾರ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು. 2014ರಲ್ಲಿ ಆಂಧ್ರ ಪ್ರದೇಶ ವಿಭಜನೆ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಕೇಂದ್ರ ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿದರು. ತಮ್ಮ ರಾಜ್ಯದ ಜನರ ವಿರುದ್ಧ ಮೋದಿ ಅವರು ವೈಯಕ್ತಿಕ ವಾಗ್ದಾಳಿ ನಡೆಸಿದರೆ ‘ಪಾಠ ಕಲಿಸುತ್ತೇವೆ’ ಎಂಬ ಎಚ್ಚರಿಕೆ ನೀಡಿದರು.

‘ಗುಜರಾತ್‌ ಗಲಭೆ ಸಂದರ್ಭದಲ್ಲಿ(2002) ರಾಜಧರ್ಮ ಪಾಲನೆ ಆಗಿಲ್ಲ ಎಂದು ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಹೇಳಿದ್ದರು. ಆಂಧ್ರ ಪ್ರದೇಶದ ವಿಚಾರದಲ್ಲಿಯೂ ರಾಜಧರ್ಮ ಪಾಲನೆ ಆಗಿಲ್ಲ. ನ್ಯಾಯಯುತವಾಗಿ ನಮಗೆ ಏನು ಸಿಗಬೇಕಿತ್ತೋ ಅದನ್ನು ನಿರಾಕರಿಸಲಾಗಿದೆ’ ಎಂದು ನಾಯ್ಡು ಹೇಳಿದರು.

ADVERTISEMENT

‘ಆಂಧ್ರ ಪ್ರದೇಶಕ್ಕೆ ಮಾಡಿರುವ ಗಂಭೀರ ಅನ್ಯಾಯವು ದೇಶದ ಏಕತೆ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಬಹುದು. ಐದು ಕೋಟಿ ಜನರ ಪರವಾಗಿ ನಾನು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇನೆ. ಆಂಧ್ರ ಪ್ರದೇಶ ಪುನರ್‌ರಚನೆ ಕಾಯ್ದೆಯಲ್ಲಿ ನೀಡಿದ ಭರವಸೆಗಳನ್ನು ನೆನಪಿಸುವುದಕ್ಕಾಗಿ ಇಲ್ಲಿಗೆ ಬಂದಿದ್ದೇನೆ’ ಎಂದು ಅವರು ಹೇಳಿದರು.

‘ಯಾರಾದರೂ ನಿಮ್ಮ ಆತ್ಮಗೌರವಕ್ಕೆ ಪೆಟ್ಟು ಕೊಟ್ಟರೆ ಅವರಿಗೆ ಪಾಠ ಕಲಿಸಿ ಎಂದು ಟಿಡಿಪಿ ಸಂಸ್ಥಾಪಕ ಎನ್‌.ಟಿ. ರಾಮರಾವ್‌ ಹೇಳಿದ್ದರು. ನಾವು ಸಹಿಸಿಕೊಂಡು ಕೂರುವುದಿಲ್ಲ. ತಕ್ಕ ಪ್ರತ್ಯುತ್ತರ ಕೊಟ್ಟೇ ಕೊಡುತ್ತೇವೆ’ ಎಂದು ನಾಯ್ಡು ಘೋಷಿಸಿದರು.

ಈ ದೇಶವನ್ನು ಆಳಲು ಮೋದಿ ಸರಿಯಾದ ವ್ಯಕ್ತಿ ಅಲ್ಲ. ನಮ್ಮ ಗಾಯಗಳ ಮೇಲೆ ಉಪ್ಪು ಸವರುವುದಕ್ಕಾಗಿಯೇ ಮೋದಿ ಅವರು ಗುಂಟೂರ್‌ಗೆ ಭೇಟಿ ಕೊಟ್ಟಿದ್ದರು. ಪ್ರತಿಸ್ಪರ್ಧಿ ಪಕ್ಷಗಳು ತಮ್ಮ ಹಕ್ಕುಗಳನ್ನು ಕೇಳಿದರೆ ಕೇಂದ್ರದ ತನಿಖಾ ಸಂಸ್ಥೆಗಳನ್ನು ಅವರ ಮೇಲೆ ಛೂ ಬಿಡಲಾಗುತ್ತದೆ. ಆಂಧ್ರ ಪ್ರದೇಶಕ್ಕೆ ಹತ್ತು ವರ್ಷ ವಿಶೇಷ ಸ್ಥಾನಮಾನ ಇರುತ್ತದೆ ಎಂದು ಆಗಿನ ಪ್ರಧಾನಿ ಮನಮೋಹನ್‌ ಸಿಂಗ್‌ ಹೇಳಿದ್ದರು. ಆಗ ವಿರೋಧ ಪಕ್ಷದಲ್ಲಿದ್ದ ಬಿಜೆಪಿ ಅದನ್ನು ಅನುಮೋದಿಸಿತ್ತು. ಆದರೆ, ಅದು ಸಾಧ್ಯವಿಲ್ಲ ಎಂದು ಹಣಕಾಸು ಸಚಿವಾಲಯ ಈಗ ಹೇಳುತ್ತಿದೆ ಎಂದು ನಾಯ್ಡು ವಿವರಿಸಿದರು.

‘ದೆಹಲಿಯಲ್ಲಿ ಕುಳಿತರೆ ನಮ್ಮಿಂದ ತಪ್ಪಿಸಿಕೊಳ್ಳಬಹುದು ಎಂದು ನೀವು ಭಾವಿಸಿದ್ದೀರಿ. ಆದರೆ, ಅದು ತಪ್ಪು. ಮಿತ್ರ ಪಕ್ಷಗಳ ನೆರವು ಪಡೆದು ನಮ್ಮ ಗುರಿಯನ್ನು ಸಾಧಿಸಿಯೇ ತೀರುತ್ತೇವೆ’ ಎಂದು ನಾಯ್ಡು ಹೇಳಿದರು.

ಮನಮೋಹನ್‌ ಬೆಂಬಲ:ವಿಶೇಷ ಸ್ಥಾನಮಾನದ ಬೇಡಿಕೆಯನ್ನು ಇನ್ನಷ್ಟು ವಿಳಂಬ ಮಾಡದೆ ಕೇಂದ್ರವು ಈಡೇರಿಸಬೇಕು ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆಗ್ರಹಿಸಿದ್ದಾರೆ. ‘ಸಂಸತ್ತಿನಲ್ಲಿ ಚರ್ಚೆ ಆದಾಗ ಈ ಬೇಡಿಕೆಗೆ ಎಲ್ಲ ಪಕ್ಷಗಳ ಬೆಂಬಲ ದೊರೆತಿತ್ತು. ನಾನು ನಾಯ್ಡು ಅವರ ಬೆನ್ನಿಗೆ ನಿಲ್ಲುತ್ತೇನೆ’ ಎಂದು ಮನಮೋಹನ್‌ ಹೇಳಿದ್ದಾರೆ.

ಆಂಧ್ರದ ಹಣ ಅನಿಲ್‌ ಅಂಬಾನಿಗೆ:ನಾಯ್ಡು ಅವರ ಸತ್ಯಾಗ್ರಹಕ್ಕೆ ಬೆಂಬಲ ಕೋರಲು ಆಂಧ್ರ ಭವನಕ್ಕೆ ಬಂದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ವಿರುದ್ಧ ಹರಿಹಾಯ್ದಿದ್ದಾರೆ. ಮತ್ತೆ ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ಪ್ರಸ್ತಾಪಿಸಿರುವ ಅವರು, ಆಂಧ್ರ ಪ್ರದೇಶದ ಜನರಿಂದ ಕದ್ದ ಹಣವನ್ನು ಉದ್ಯಮಿ ಅನಿಲ್‌ ಅಂಬಾನಿ ಅವರಿಗೆ ಕೊಟ್ಟಿದ್ದಾರೆ ಎಂದು ಆಪಾದಿಸಿದ್ದಾರೆ.

ದೇಶದ ಮನೋಭಾವ ಏನು ಎಂಬುದನ್ನು ವಿರೋಧ ಪಕ್ಷಗಳು ಕೆಲವೇ ತಿಂಗಳಲ್ಲಿ ಮೋದಿ ಅವರಿಗೆ ತೋರಿಸಿಕೊಡಲಿವೆ ಎಂದು ರಾಹುಲ್‌ ಹೇಳಿದರು.

ಪಾಕ್‌ ಪ್ರಧಾನಿಯಂತೆ ಮೋದಿ ವರ್ತನೆ: ಕೇಜ್ರಿವಾಲ್‌ ಆರೋಪ

ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿ ಇರುವ ರಾಜ್ಯಗಳನ್ನು ನಡೆಸಿಕೊಳ್ಳುವ ರೀತಿ ನೋಡಿದರೆ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿ ಅಲ್ಲ, ಪಾಕಿಸ್ತಾನ ಪ್ರಧಾನಿ ಅನಿಸುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಆಪಾದಿಸಿದ್ದಾರೆ.

ಪ್ರಧಾನಿ ಮೋದಿ ಅವರು ‘ಸುಳ್ಳ’. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಭರವಸೆ ಕೊಟ್ಟು ಅದನ್ನು ಈಡೇರಿಸಿಲ್ಲ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

‘ಜನರು ಬೇರೆ ಬೇರೆ ಪಕ್ಷಕ್ಕೆ ಮತ ಹಾಕಿರಬಹುದು. ಆದರೆ, ಒಬ್ಬ ವ್ಯಕ್ತಿ ಮುಖ್ಯಮಂತ್ರಿ ಆದಮೇಲೆ ಅವರು ಇಡೀ ರಾಜ್ಯದ ಮುಖ್ಯಮಂತ್ರಿಯೇ ಹೊರತು ಒಂದು ಪಕ್ಷದ ಮುಖ್ಯಮಂತ್ರಿ ಅಲ್ಲ. ಅದೇ ರೀತಿ ಪ್ರಧಾನಿ ಕೂಡ. ಒಬ್ಬ ವ್ಯಕ್ತಿ ಪ್ರಧಾನಿಯಾದ ಮೇಲೆ ಅವರು ಇಡೀ ದೇಶದ ಪ್ರಧಾನಿಯೇ ಹೊರತು ಒಂದು ಪಕ್ಷದ ಪ್ರಧಾನಿ ಅಲ್ಲ’ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಮತ್ತು ಸಾವಿರಾರು ಜನರು ದೆಹಲಿಗೆ ಬಂದು ಪ್ರತಿಭಟನೆ ನಡೆಸಬೇಕಾಗಿ ಬಂದದ್ದು ದುರದೃಷ್ಟಕರ. ಇದು ದೇಶದ ಒಕ್ಕೂಟ ವ್ಯವಸ್ಥೆಯ ಮುಂದೆ ದೊಡ್ಡ ಪ್ರಶ್ನೆಯನ್ನು ಇರಿಸಿದೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ವಿರೋಧ ಪಕ್ಷಗಳ ಬೆಂಬಲ

ನಾಯ್ಡು ಅವರ ಒಂದು ದಿನದ ಉಪವಾಸ ಸತ್ಯಾಗ್ರಹವು ಬಿಜೆಪಿ ವಿರೋಧಿ ಪಕ್ಷಗಳ ಒಗ್ಗಟ್ಟಿನ ಪುನರುಚ್ಚರಿಸುವಿಕೆಯೂ ಆಯಿತು.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಫಾರೂಕ್‌ ಅಬ್ದುಲ್ಲಾ, ಎನ್‌ಸಿಪಿಯ ಶರದ್‌ ಪವಾರ್‌, ಟಿಎಂಸಿಯ ಡೆರೆಕ್‌ ಒ ಬ್ರಯಾನ್‌, ಡಿಎಂಕೆಯ ತಿರುಚ್ಚಿ ಶಿವಾ, ಎಸ್‌ಪಿಯ ಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ಮುಂತಾದವರು ಸತ್ಯಾಗ್ರಹ ಸ್ಥಳಕ್ಕೆ ಭೇಟಿ ಕೊಟ್ಟು ಬೆಂಬಲ ವ್ಯಕ್ತಪಡಿಸಿದರು.

ಮತ್ತೆ ಮುನ್ನೆಲೆಗೆ ಬಂತು ‘ಬಿ.ಸಿ.’ , ‘ಎ.ಡಿ.’

ಕಾಲ ಸೂಚಕ ಸಂಕ್ಷಿಪ್ತಾಕ್ಷರಗಳಾದ ‘ಬಿ.ಸಿ.’ ಮತ್ತು ‘ಎ.ಡಿ.’ಗಳು ಮತ್ತೆ ಚರ್ಚೆಗೆ ಬಂದಿವೆ. ಬಿ.ಸಿ. ಅಂದರೆ ಬಿಫೋರ್‌ ಚಾಯ್‌ವಾಲಾ (ಚಹಾ ಮಾರುವವನಿಗಿಂತ ಮೊದಲು) ಮತ್ತು ಎ.ಡಿ. ಎಂದರೆ ಆಫ್ಟರ್‌ ಧೋಕಾ (ವಂಚನೆಯ ನಂತರ) ಎಂದು ಡೆರೆಕ್‌ ಒ ಬ್ರಯಾನ್‌ ಹೇಳಿದ್ದಾರೆ. ಬಿ.ಸಿ. ಎಂದರೆ ಬಿಫೋರ್‌ ಕಾಂಗ್ರೆಸ್‌ (ಕಾಂಗ್ರೆಸ್‌ಗೆ ಮೊದಲು) ಮತ್ತು ಎ.ಡಿ. ಎಂದರೆ ಆಫ್ಟರ್‌ ಡೈನಾಸ್ಟಿ (ವಂಶಾಡಳಿತದ ನಂತರ) ಎಂದು ಮೋದಿ ಅವರು ಇತ್ತೀಚೆಗೆ ಹೇಳಿದ್ದರು.

ಆಂಧ್ರ ಪ್ರದೇಶದ ಗುಂಟೂರ್‌ಗೆ ಭೇಟಿ ನೀಡಿದ್ದ ಮೋದಿ ಅವರು ಅಭಿವೃದ್ಧಿ ಅಥವಾ ವಿಶೇಷ ಸ್ಥಾನಮಾನದ ಬಗ್ಗೆ ಮಾತನಾಡುವ ಬದಲಿಗೆ ವೈಯಕ್ತಿಕ ದಾಳಿ ನಡೆಸಿದರು ಎಂದು ಡೆರೆಕ್‌ ಹೇಳಿದ್ದಾರೆ.

***

ನಾನು ಮತ್ತು ನನ್ನ ಜನರ ವಿರುದ್ಧ ವೈಯಕ್ತಿಕ ಟೀಕೆ ಮಾಡಬೇಡಿ. ಅದು ಅನಪೇಕ್ಷಿತ. ರಾಜ್ಯದ ಮುಖ್ಯಸ್ಥನಾಗಿ ನನ್ನ ಕರ್ತವ್ಯ ಮಾಡುತ್ತಿದ್ದೇನೆ. ನಮಗೆ ಕೊಟ್ಟ ಭರವಸೆ ಈಡೇರಿಸಿ ಎಂಬುದಷ್ಟೇ ನಮ್ಮ ಆಗ್ರಹ

–ಚಂದ್ರಬಾಬು ನಾಯ್ಡು, ಆಂಧ್ರ ಪ್ರದೇಶ ಮುಖ್ಯಮಂತ್ರಿ

**

ಆಂಧ್ರ ಪ್ರದೇಶಕ್ಕೆ ಹೋದಾಗಲೆಲ್ಲ ವಿಶೇಷ ಸ್ಥಾನಮಾನದ ಬಗ್ಗೆ ಮೋದಿ ಸುಳ್ಳು ಹೇಳುತ್ತಾರೆ. ಯಾವ ರಾಜ್ಯಕ್ಕೆ ಹೋದರೂ ಸುಳ್ಳೇ ಹೇಳುತ್ತಾರೆ. ಅವರಲ್ಲಿ ವಿಶ್ವಾಸಾರ್ಹತೆ ಎಂಬುದು ಒಂದಿಷ್ಟೂ ಉಳಿದಿಲ್ಲ

–ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.