ನವದೆಹಲಿ: ವ್ಯಕ್ತಿಯೊಬ್ಬ ಸಾಯುವ ಸಂದರ್ಭದಲ್ಲಿ ಆಡಿದ ಮಾತುಗಳಲ್ಲಿ ಸಾಮ್ಯತೆ ಇಲ್ಲದಿದ್ದರೆ, ಆ ಮಾತುಗಳ ಪೈಕಿ ಯಾವುದು ಸತ್ಯ ಎಂಬುದನ್ನು ತಿಳಿಯಲು ನ್ಯಾಯಾಲಯವು ಸಮರ್ಥಿಸುವ ಸಾಕ್ಷ್ಯಗಳನ್ನು ಅರಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪತ್ನಿಯನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ ಸತೀಶ್ ಎನ್ನುವವರನ್ನು ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರು ಇರುವ ವಿಭಾಗೀಯ ಪೀಠವು ದೋಷಮುಕ್ತಗೊಳಿಸಿದೆ. ಪತ್ನಿಯು ಸಾಯುವಾಗ ನೀಡಿದ್ದ ಹೇಳಿಕೆಯು ಅನುಮಾನ ಮೂಡಿಸುವಂತೆ ಇದೆ ಎಂದು ಪೀಠವು ಹೇಳಿದೆ.
‘ಸಾಯುವಾಗ ನೀಡಿದ ಹೇಳಿಕೆಯ ಬಗ್ಗೆ ಅನುಮಾನ ಇದ್ದಾಗ, ಸಮರ್ಥನೆಗೆ ಅಗತ್ಯವಾದ ಸಾಕ್ಷ್ಯಗಳು ಇಲ್ಲದೆ ಆರೋಪಿಯನ್ನು ಅಪರಾಧಿ ಎಂದು ಘೋಷಿಸುವುದು ಸರಿಯಲ್ಲ. ಸಾಯುವ ಮೊದಲು ವ್ಯಕ್ತಿಯು ತನ್ನ ಹೇಳಿಕೆಯನ್ನು ಮತ್ತೆ ಮತ್ತೆ ಬದಲಾಯಿಸಿದ್ದರೆ, ಹಿಂದಿನ ಹೇಳಿಕೆಗೆ ಸಂಪೂರ್ಣವಾಗಿ ಭಿನ್ನವಾದ ಹೇಳಿಕೆ ನೀಡಿದ್ದರೆ, ಸಮರ್ಥನೆಗೆ ಅಗತ್ಯವಾದ ಸಾಕ್ಷ್ಯಗಳು ಇಲ್ಲದಿದ್ದರೆ ಅಂತಹ ಮರಣಪೂರ್ವ ಹೇಳಿಕೆಯನ್ನು ಮಾತ್ರವೇ ನೆಚ್ಚಿಕೊಂಡು ಆರೋಪಿಯನ್ನು ಅಪರಾಧಿ ಎಂದು ಘೋಷಿಸಲಾಗದು’ ಎಂದು ಪೀಠವು ವಿವರಿಸಿದೆ.
ಸಾಯುವ ಮುನ್ನ ಮಹಿಳೆಯು ಮ್ಯಾಜಿಸ್ಟ್ರೇಟರ ಎದುರು ನೀಡಿದ್ದ ಹೇಳಿಕೆಯನ್ನೇ ಮುಖ್ಯ ಆಧಾರವಾಗಿ ಇರಿಸಿಕೊಂಡು ವಿಚಾರಣಾ ನ್ಯಾಯಾಲಯವು ಸತೀಶ್ ಅವರನ್ನು ಅಪರಾಧಿ ಎಂದು ಘೋಷಿಸಿತ್ತು.
ಸತೀಶ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠವು, ಮೃತ ಮಹಿಳೆಯು ಬಹಳ ಭಿನ್ನವಾದ ಹೇಳಿಕೆಗಳನ್ನು ನೀಡಿದ್ದರು ಎಂಬುದಾಗಿ ಹೇಳಿದೆ.
‘ಮರಣಪೂರ್ವದಲ್ಲಿ ನೀಡುವ ಹೇಳಿಕೆಯು ಬಹಳ ಮುಖ್ಯವಾದ ಸಾಕ್ಷ್ಯವಾಗುತ್ತದೆ. ಕ್ರಿಮಿನಲ್ ಕಾನೂನುಗಳಲ್ಲಿ ಇದಕ್ಕೆ ಬಹಳ ಪ್ರಾಮುಖ್ಯ ಇರುವ ಕಾರಣ, ಈ ಹೇಳಿಕೆಯೊಂದನ್ನೇ ಆಧರಿಸಿ ಅಪರಾಧಿ ಯಾರೆಂಬುದನ್ನು ಘೋಷಿಸಬಹುದು. ಆದರೆ ಮರಣಪೂರ್ವ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಪ್ರಕರಣದ ಅಷ್ಟೂ ಸಂಗತಿಗಳನ್ನು ಪರಿಗಣಿಸಿ ಆ ಕೆಲಸ ಮಾಡಬೇಕು’ ಎಂದು ನ್ಯಾಯಪೀಠವು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.