ADVERTISEMENT

ದೇಶದ್ರೋಹ ಕಾನೂನು ಪ್ರಶ್ನಿಸಿ ಅರ್ಜಿ ಸಲ್ಲಿಕೆ: ವಿಚಾರಣೆಗೆ ‘ಸುಪ್ರೀಂ’ ಸಮ್ಮತಿ

ಪಿಟಿಐ
Published 14 ಜುಲೈ 2021, 11:26 IST
Last Updated 14 ಜುಲೈ 2021, 11:26 IST
.ಸುಪ್ರೀಂ ಕೋರ್ಟ್‌
.ಸುಪ್ರೀಂ ಕೋರ್ಟ್‌    

ನವದೆಹಲಿ: ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ನಿವೃತ್ತ ಸೇನಾ ಅಧಿಕಾರಿಯೊಬ್ಬರು ಸಲ್ಲಿಸಿರುವ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್‌ ವಿಚಾರಣೆಗೆ ಸ್ವೀಕರಿಸಿದ್ದು, ಅರ್ಜಿಯ ಪ್ರತಿಯೊಂದನ್ನು ಅಟಾರ್ನಿ ಜನರಲ್‌ ಅವರಿಗೆ ಸಲ್ಲಿಸುವಂತೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ಹೃಷಿಕೇಶ್‌ ರಾಯ್‌ ಅವರಿದ್ದ ಪೀಠವು, ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅವರ ಮೂಲಕ ಸರ್ಕಾರದ ಗಮನಕ್ಕೆ ತರುವ ಕ್ರಮ ಕೈಗೊಂಡಿತು.

ಮೇಜರ್‌ ಜನರಲ್‌ (ನಿವೃತ್ತ) ಎಸ್.ಜಿ.ಒಂಬತ್ತುಕೆರೆ ಅವರು ಈ ಅರ್ಜಿ ಸಲ್ಲಿಸಿದ್ದು, ದೇಶದ್ರೋಹ ಕಾನೂನಿನಿಂದ ವಾಕ್‌ ಸ್ವಾತಂತ್ರ್ಯಕ್ಕೆ ಭಾರಿ ದುಷ್ಪರಿಣಾಮ ಉಂಟಾಗಿದ್ದು, ಸಂವಿಧಾನ ಒದಗಿಸಿರುವ ಮೂಲಭೂತ ಹಕ್ಕಾಗಿರುವ ಮುಕ್ತವಾಗಿ ಭಾವನೆ ವ್ಯಕ್ತಪಡಿಸುವುದಕ್ಕೆ ವಿನಾಕಾರಣ ನಿರ್ಬಂಧ ವಿಧಿಸಿದಂತಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ADVERTISEMENT

‘ಭಾರತೀಯ ದಂಡ ಸಂಹಿತೆಯ 124–ಎ ಸೆಕ್ಷನ್‌ ಅಡಿಯಲ್ಲಿ ದೇಶದ್ರೋಹ ಪ್ರಕರಣವನ್ನು ನಿಭಾಯಿಸಲಾಗುತ್ತಿದ್ದು, ಇದೊಂದು ಸಂವಿಧಾನಬಾಹಿರ ಕಾನೂನು ಆಗಿದೆ, ಇದನ್ನು ಸಾರಾಸಗಟಾಗಿ ರದ್ದುಪಡಿಸಬೇಕು’ ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

‘ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವುದೇ ಅಪರಾಧ ಎಂಬಂತೆ ಬಿಂಬಿಸುವ ಮೂಲಕ ಸಂವಿಧಾನದ 19 (1) (ಎ) ವಿಧಿಯ ಮೂಲಕ ಒದಗಿಸಲಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿನಾಕಾರಣ ನಿರ್ಬಂಧ ವಿಧಿಸಲಾಗಿದೆ’ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.