ADVERTISEMENT

ಐಐಟಿ ಬಾಂಬೆಯಲ್ಲಿ ಪ್ರವೇಶ: ವಿದ್ಯಾರ್ಥಿ ನೆರವಿಗೆ ‘ಸುಪ್ರೀಂ’

ಪ್ರಮಾದವಶಾತ್‌ ಸೀಟು ಕಳೆದುಕೊಂಡಿದ್ದ ವಿದ್ಯಾರ್ಥಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 11:22 IST
Last Updated 9 ಡಿಸೆಂಬರ್ 2020, 11:22 IST
.ಸುಪ್ರೀಂ ಕೋರ್ಟ್‌
.ಸುಪ್ರೀಂ ಕೋರ್ಟ್‌   

ನವದೆಹಲಿ: ಪ್ರವೇಶ ಪ್ರಕ್ರಿಯೆ ಸಂದರ್ಭದಲ್ಲಿ ಪ್ರಮಾದವಶಾತ್‌ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆಯಲ್ಲಿ ಸೀಟು ಕಳೆದುಕೊಂಡಿದ್ದ ವಿದ್ಯಾರ್ಥಿಯೊಬ್ಬನಿಗೆ ಈಗ ಸುಪ್ರೀಂ ಕೋರ್ಟ್‌ ನೆರವಿಗೆ ಬಂದಿದೆ.

ಈ ವಿದ್ಯಾರ್ಥಿಗೆ ತಾತ್ಕಾಲಿಕ ಪ್ರವೇಶ ಕಲ್ಪಿಸಬೇಕು ಎಂದು ನ್ಯಾಯಾಲಯವು ಐಐಟಿ ಬಾಂಬೆಗೆ ಸೂಚಿಸಿದೆ.

ಐಐಟಿ ಬಾಂಬೆಯಲ್ಲಿ ನಾಲ್ಕು ವರ್ಷದ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಸೀಟು ಪಡೆಯುವ ಕನಸು ಹೊಂದಿದ್ದ ಆಗ್ರಾ ಮೂಲದ ಸಿದ್ಧಾಂತ್‌ ಬಾತ್ರಾ, ಪ್ರವೇಶ ಪಡೆಯುವ ಸಂದರ್ಭದಲ್ಲಿ ತಪ್ಪಾದ ಲಿಂಕ್‌ ಒತ್ತಿದ್ದರು. ಸೀಟು ರದ್ದುಪಡಿಸುವ ಲಿಂಕ್‌ ಇದಾಗಿತ್ತು. ಇದರಿಂದಾಗಿ, ಸಿದ್ಧಾಂತ ಸೀಟು ಕಳೆದುಕೊಂಡಿದ್ದರು.

ADVERTISEMENT

ತಪ್ಪು ಅರಿವಿಗೆ ಬಂದ ಬಳಿಕ, ಬಾಂಬೆ ಹೈಕೋರ್ಟ್‌ನಲ್ಲಿ ಸಿದ್ಧಾಂತ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್‌ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಪ್ರವೇಶ ಪ್ರಕ್ರಿಯೆ ನಿಯಮಾವಳಿಗಳನ್ನು ಪಾಲಿಸಬೇಕು ಮತ್ತು ಈಗಾಗಲೇ ಎಲ್ಲ ಸೀಟುಗಳು ಭರ್ತಿಯಾಗಿರುವುದರಿಂದ ಈ ಹಂತದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಐಐಟಿ ಬಾಂಬೆ ಸಲ್ಲಿಸಿದ್ದ ಉತ್ತರವನ್ನು ಪರಿಗಣಿಸಿ ಹೈಕೋರ್ಟ್‌ ಈ ಆದೇಶ ನೀಡಿತ್ತು.

ಈ ಆದೇಶ ಪ್ರಶ್ನಿಸಿ ಸಿದ್ಧಾಂತ್‌ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಎಸ್‌.ಕೆ. ಕೌಲ್‌ ನೇತೃತ್ವದ ಪೀಠವು ಈ ಅರ್ಜಿಯನ್ನು ಪರಿಗಣಿಸಿ ತಾತ್ಕಾಲಿಕ ಪ್ರವೇಶ ನೀಡುವಂತೆ ಐಐಟಿ ಬಾಂಬೆಗೆ ಸೂಚಿಸಿದೆ. ಜತೆಗೆ, ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆಯೂ ತಿಳಿಸಿದೆ. ಈ ಪ್ರಕರಣದ ವಿಚಾರಣೆಯನ್ನು ಚಳಿಗಾಲದ ರಜೆ ಬಳಿಕ ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ.

ನ್ಯಾಯಾಲಯ ನೀಡುವ ಅಂತಿಮ ಆದೇಶ ಮೇಲೆ ಪ್ರವೇಶ ಪ್ರಕ್ರಿಯೆ ಅವಲಂಬಿತವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ ಎಂದು ಸಿದ್ಧಾಂತ್‌ ಪರ ವಕೀಲ ಪ್ರಹ್ಲಾದ್‌ ಪರಾಂಜಪೆ ತಿಳಿಸಿದ್ದಾರೆ.

ಸಿದ್ಧಾಂತ್‌ ಬತ್ರಾ, ಜೆಇಇ ಅಡ್ವಾನ್ಸ್ಡ್‌ನಲ್ಲಿ 270ನೇ ರ್‍ಯಾಂಕ್‌ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.