ADVERTISEMENT

ಕೇರಳಕ್ಕೆ ಒಮ್ಮೆಲೇ ನೆರವು ನೀಡುವ ಪ್ರಸ್ತಾವ ಪರಿಗಣಿಸಿ: ಸುಪ್ರೀಂ ಕೋರ್ಟ್

ಪಿಟಿಐ
Published 12 ಮಾರ್ಚ್ 2024, 16:11 IST
Last Updated 12 ಮಾರ್ಚ್ 2024, 16:11 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿರುವ ಕೇರಳಕ್ಕೆ ಮಾರ್ಚ್‌ 31ರ ಒಳಗೆ ಒಮ್ಮೆಲೇ ಹಣಕಾಸು ನೆರವು ಬಿಡುಗಡೆ ಮಾಡುವ ಪ್ರಸ್ತಾವವನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

ಕೇಂದ್ರ ಸರ್ಕಾರವು ಅಗತ್ಯ ನಿಧಿ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ಕೇರಳ ಸರ್ಕಾರ ಸಲ್ಲಿಸಿರುವ ಅರ್ಜಿಯು ವಿಚಾರಣೆಗೆ ಬಾಕಿಯಿದೆ. ಅದನ್ನು ತ್ವರಿತ ವಿಚಾರಣೆಗಾಗಿ ಪಟ್ಟಿ ಮಾಡಬೇಕು ಎಂದು ರಾಜ್ಯದ ಪರ ವಕೀಲ ಕಪಿಲ್‌ ಸಿಬಲ್‌ ಅವರು ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಕೆ.ವಿ. ವಿಶ್ವನಾಥನ್‌ ಅವರಿದ್ದ ನ್ಯಾಯಪೀಠದೆದುರು ಮನವಿ ಮಾಡಿದರು. 

ADVERTISEMENT

ಇದಕ್ಕೆ ಒಪ್ಪಿದ ಪೀಠವು, ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸುವುದಾಗಿ ಹೇಳಿತು. ಜೊತೆಗೆ, ‘ಈ ವಿಶೇಷ ಪ್ರಕರಣದಲ್ಲಿ ತುಸು ಔದಾರ್ಯ ತೋರಿ ಕೇಂದ್ರ ಸರ್ಕಾರವು ಕೇರಳಕ್ಕೆ ಒಮ್ಮೆಲೇ ನೆರವು ಬಿಡುಗಡೆ ಮಾಡಬಹುದು’ ಎಂದಿತು.

ಕೇಂದ್ರ ಸರ್ಕಾರದ ಪರವಾಗಿ ಕೋರ್ಟ್‌ನಲ್ಲಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್‌ (ಎಎಸ್‌ಜಿ) ಎನ್. ವೆಂಕಟರಮಣ್‌ ಅವರು, ‘ಕೇರಳದ ಆಯವ್ಯಯದ ಮೇಲೆ ಆಫ್‌ಸೆಟ್‌ ಬ್ಯಾಲೆನ್ಸ್‌ (ಸಾಲ ಪಡೆಯುವವರು ಬ್ಯಾಂಕ್‌ ಖಾತೆಯಲ್ಲಿ ಇರಿಸಿಕೊಂಡಿರಬೇಕಾದ ಕನಿಷ್ಠ ಠೇವಣಿ) ಗುರುತರ ಪರಿಣಾಮ ಬೀರುತ್ತದೆ. ರಾಜ್ಯವು ಈಗಾಗಲೇ ಎರಡು ಬಾರಿ ಹಣಕಾಸು ಕ್ರೋಢೀಕರಣವನ್ನು ಮುಂದೂಡಿದೆ. ಈ ಕಾರಣದಿಂದಾಗಿ ನೆರವು ನೀಡುವ ವಿಚಾರದಲ್ಲಿ ನಮ್ಮ ಕೈ ಕಟ್ಟಿಹಾಕಿದಂತಾಗಿದೆ’ ಎಂದರು.

‘ಈ ವಿಚಾರದಲ್ಲಿ ಸಲಹೆ ನೀಡಲು ನಾವು ವಿಷಯತಜ್ಞರಲ್ಲ’ ಎಂದು ನ್ಯಾಯಪೀಠ ಎಎಸ್‌ಜಿಗೆ ಹೇಳಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.