ADVERTISEMENT

Waqf law: ಸಿಂಧುತ್ವ ಪ್ರಶ್ನಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು

ಪಿಟಿಐ
Published 15 ಏಪ್ರಿಲ್ 2025, 11:49 IST
Last Updated 15 ಏಪ್ರಿಲ್ 2025, 11:49 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆ 2025ರ ಹಲವು ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಹೊಸ ಅರ್ಜಿ ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.

ವಕೀಲ ವಿಷ್ಣು ಶಂಕರ್ ಶರ್ಮಾ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಮುಖ್ಯ ನ್ಯಾಯಮೂರ್ತೀ ಸಂಜೀವ್ ಖನ್ನಾ, ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನು ಒಳಗೊಂಡ ಪೀಠ ಹೇಳಿದೆ.

‘ಎಲ್ಲ ವಿಚಾರಗಳನ್ನು ಉಲ್ಲೇಖಿಸಿರುವ ಪಟ್ಟಿ ನೀಡಲಾಗಿದ್ದು, ಬಹುತೇಕ ವಾರದಲ್ಲಿ ದಿನಾಂಕ ನೀಡುತ್ತೇವೆ’ಎಂದು ಸಿಜೆಐ ತಿಳಿಸಿದ್ದಾರೆ.

ADVERTISEMENT

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೇರಿದಂತೆ ಇತರರು ಸಲ್ಲಿಸಿರುವ ಸುಮಾರು 10 ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 10ಕ್ಕೆ ನಿಗದಿಪಡಿಸಿದೆ. ಮುಖ್ಯ ನ್ಯಾಯಮೂರ್ತಿ, ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ.ವಿ. ವಿಶ್ವನಾಥ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠದ ಮುಂದೆ ಈ ಅರ್ಜಿಗಳು ವಿಚಾರಣೆಗೆ ಬರಲಿವೆ.

ಹರಿ ಶಂಕರ್ ಜೈನ್ ಮತ್ತು ಮಣಿ ಮುಂಜಾಲ್ ಎಂಬುವವರ ಪರವಾಗಿ ವಕೀಲ ವಿಷ್ಣು ಶಂಕರ್ ಜೈನ್ ಸಲ್ಲಿಸಿರುವ ಹೊಸ ಅರ್ಜಿಯು ಭಾರತ ಸರ್ಕಾರ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಮತ್ತು ಕೇಂದ್ರ ವಕ್ಫ್ ಕೌನ್ಸಿಲ್ ವಿರುದ್ಧವಾಗಿದೆ.

ವಕ್ಫ್ ತಿದ್ದುಪಡಿ ಕಾಯ್ದೆ 2025ರ ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವವನ್ನು ಈ ಅರ್ಜಿ ಪ್ರಶ್ನಿಸುತ್ತದೆ.

ಆ ನಿಬಂಧನೆಗಳು ಭಾರತದ ಸಂವಿಧಾನದ 14, 15, 21, 25,26,27 ಮತ್ತು 300ಎ ವಿಧಿಗಳನ್ನು ಉಲ್ಲಂಘಿಸುತ್ತವೆ. ಇದು ಸಮಾಜದಲ್ಲಿ ಅಸಮತೋಲನ ಮತ್ತು ಕೋಮು ಸೌಹಾರ್ದತೆ ಹದಗೆಡಿಸುತ್ತದೆ ಎಂದು ವಾದಿಸಿದ್ದಾರೆ.

ವಕ್ಫ್ ಮಂಡಳಿಗಳು, ಈ ಕಾನೂನು ನಿಬಂಧನೆಗಳ ಮೂಲಕ ದೇಶದಾದ್ಯಂತ ಸರ್ಕಾರಿ ಮತ್ತು ಖಾಸಗಿ ಭೂಮಿಯನ್ನು ದೊಡ್ಡ ಪ್ರಮಾಣದಲ್ಲಿ ಆಕ್ರಮಿಸಿಕೊಳ್ಳಲು ಕಾರಣವಾಗುವ ಅತಿಯಾದ ಅಧಿಕಾರವನ್ನು ಪಡೆದಿವೆ ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.