ADVERTISEMENT

ಹಿಜಾಬ್‌ ಕುರಿತ ಮೇಲ್ಮನವಿಗಳ ವಿಚಾರಣೆಗೆ ಪೀಠ ರಚನೆ –ಸುಪ್ರೀಂ

ಪಿಟಿಐ
Published 2 ಆಗಸ್ಟ್ 2022, 16:52 IST
Last Updated 2 ಆಗಸ್ಟ್ 2022, 16:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮುಸ್ಲಿಂ ವಿದ್ಯಾರ್ಥಿನಿಯರು ಶಾಲೆಗೆ ಹಿಜಾಬ್‌ ಧರಿಸಿ ಬರುವುದಕ್ಕೆ ಹೇರಿರುವ ನಿಷೇಧ ರದ್ದುಪಡಿಸಿ ಆದೇಶ ನೀಡಲು ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್‌ ವಿರುದ್ಧದ ಅರ್ಜಿಗಳ ವಿಚಾರಣೆಗೆಸುಪ್ರೀಂ ಕೋರ್ಟ್‌ ಪ್ರತ್ಯೇಕ ಪೀಠ ರಚಿಸಲಿದೆ.

ಹಿರಿಯ ವಕೀಲರಾದ ಮೀನಾಕ್ಷಿ ಅರೋರಾ ಅವರ ವಾದವನ್ನು ಆಲಿಸಿದ ಬಳಿಕ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಮತ್ತು ನ್ಯಾಯಮೂರ್ತಿ ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಅವರಿದ್ದ ಪೀಠವು ಈ ತೀರ್ಮಾನ ಪ್ರಕಟಿಸಿತು.

ಹಿಜಾಬ್‌ ಧರಿಸುವುದರ ವಿರುದ್ಧದ ನಿಷೇಧ ರದ್ದುಪಡಿಸಬೇಕು ಎಂದು ಕೋರಿ ಕಳೆದ ಮಾರ್ಚ್‌ ತಿಂಗಳಲ್ಲೇ ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಇನ್ನೂ ಅವುಗಳನ್ನು ವಿಚಾರಣೆಗೆ ಪರಿಗಣಿಸಿಲ್ಲ ಎಂದು ವಕೀಲರು ಪೀಠದ ಗಮನಕ್ಕೆ ತಂದರು.

ADVERTISEMENT

‘ಈ ಅರ್ಜಿಗಳ ವಿಚಾರಣೆಗೆ ನಾವು ಪ್ರತ್ಯೇಕ ಪೀಠವನ್ನು ರಚಿಸುತ್ತೇವೆ. ಸದ್ಯ, ನ್ಯಾಯಮೂರ್ತಿಯೊಬ್ಬರ ಆರೋಗ್ಯ ಸರಿ ಇಲ್ಲ. ಕಾಯಿರಿ, ನ್ಯಾಯಮೂರ್ತಿಯವರು ಚೇತರಿಸಿಕೊಂಡ ಕೂಡಲೇ ಇದು ವಿಚಾರಣೆಗೆ ಬರಬಹುದು’ ಎಂದು ಸಿಜೆಐ ಹೇಳಿದರು.

ಈ ವಿಷಯ ಕುರಿತ ಅರ್ಜಿಗಳ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಇದೇ 13ರಂದು ಒಪ್ಪಿಕೊಂಡಿತ್ತು. ಅಂದು ವಕೀಲ ಪ್ರಶಾಂತ್‌ ಭೂಷಣ್‌ ಅವರು, ‘ವಿದ್ಯಾರ್ಥಿನಿಯರು ಕಲಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದು, ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಗಮನಸಳೆದಿದ್ದರು.

ಹಿಜಾಬ್ ಧರಿಸಿ ತರಗತಿಗೆ ಬರುವುದನ್ನು ನಿಷೇಧಿಸಿದ್ದ ಕರ್ನಾಟಕ ಸರ್ಕಾರದ ಆದೇಶ ರದ್ದುಪಡಿಸಲು ನಿರಾಕರಿಸಿದ್ದ ಕರ್ನಾಟಕ ಹೈಕೋರ್ಟ್‌ ಈ ಕುರಿತ ಅರ್ಜಿಗಳನ್ನು ವಜಾ ಮಾಡಿತ್ತು. ‘ಹಿಜಾಬ್‌ ಧರಿಸುವುದು ಧಾರ್ಮಿಕ ಆಚರಣೆಯ ಭಾಗವಲ್ಲ. ಹೀಗಾಗಿ, ಸಂವಿಧಾನದ ವಿಧಿ 25ರ ಅನ್ವಯ ಈ ಹಕ್ಕನ್ನು ರಕ್ಷಿಸಲಾಗದು’ ಎಂದು ಹೈಕೋರ್ಟ್‌ ಆಗ ಹೇಳಿತ್ತು.

ತರಗತಿಯಲ್ಲಿ ಹಿಜಾಬ್ ಅನ್ನು ಧರಿಸಲು ಅವಕಾಶ ಕಲ್ಪಿಸಬೇಕು ಎಂದು ಕೋರಿ ಉಡುಪಿಯ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.