ADVERTISEMENT

ಮುನಂಬಮ್ ವಕ್ಫ್‌ ಭೂಮಿ ವಿವಾದ: ಬಿಜೆಪಿಗೆ ಹಿನ್ನೆಡೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 16:03 IST
Last Updated 16 ಏಪ್ರಿಲ್ 2025, 16:03 IST
   

ತಿರುವನಂತಪುರ: ಮುನಂಬಮ್ ವಕ್ಫ್‌ ಭೂಮಿ ವಿವಾದಕ್ಕೆ ಸಂಬಂಧಿಸಿ ಕೇರಳದ ಕ್ರಿಶ್ಚಿಯನ್‌ ಸಮುದಾಯದವನ್ನು ಪ್ರಭಾವಿಸುವ ಬಿಜೆಪಿ ಯತ್ನವು ಅಷ್ಟೇನೂ ಫಲಪ್ರದವಾದಂತೆ ತೋರುತ್ತಿಲ್ಲ. ‘ಬಿಜೆಪಿಯು ಹೇಳುತ್ತಿದ್ದಂತೆ ವಕ್ಫ್‌ (ತಿದ್ದುಪಡಿ) ಕಾಯ್ದೆಯು ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಕಾಣುತ್ತಿಲ್ಲ’ ಎಂಬ ಅಭಿಪ್ರಾಯವನ್ನು ಸಮುದಾಯದ ನಾಯಕರು ವ್ಯಕ್ತಪಡಿಸುತ್ತಿದ್ದಾರೆ.

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರು ಮಂಗಳವಾರ ಮುನಂಬಮ್‌ಗೆ ಭೇಟಿ ನೀಡಿದ್ದರು. ಅವರ ಭೇಟಿಯ ಬಳಿಕ ಮುನಂಬಮ್‌ ನಿವಾಸಿಗಳ ಕಾರ್ಯಕಾರಿ ಸಮಿತಿ ಮತ್ತು ಸೈರೊ ಮಲಬಾರ್‌ ಕ್ಯಾಥೋಲಿಕ್‌ ಚರ್ಚ್‌, ಬಹಿರಂಗವಾಗಿಯೇ ಕಳವಳ ವ್ಯಕ್ತಪಡಿಸಿವೆ.

‘ಈ ಪ್ರದೇಶದ ಜನರ ಸಮಸ್ಯೆಗಳಿಗೆ ವಕ್ಫ್‌ ಕಾಯ್ದೆಗೆ ತಂದಿರುವ ತಿದ್ದುಪಡಿಯು ನೇರವಾಗಿ ಪರಿಹಾರ ಒದಗಿಸುವುದಿಲ್ಲ. ಕೆಲವು ರಾಜಕೀಯ ಪಕ್ಷದ ನಾಯಕರು ಈ ಭಾಗದ ಜನರ ದಾರಿ ತಪ್ಪಿಸಿದ್ದಾರೆ. ತಮ್ಮ ಪಕ್ಷಕ್ಕೆ ಭಾವನಾತ್ಮಕ ಬೆಂಬಲ ಗಿಟ್ಟಿಸಿಕೊಳ್ಳಲು ಈ ರೀತಿ ಮಾಡಿದ್ದಾರೆ’ ಎಂದು ಮಲಬಾರ್‌ ಚರ್ಚ್‌ನ ವಕ್ತಾರ ಆ್ಯಂಥೋನಿ ವಡಕ್ಕೇಕರ್‌ ಬುಧವಾರ ಹೇಳಿದರು.

ADVERTISEMENT

‘ನಮ್ಮ ಸಮಸ್ಯೆಗಳಿಗೆ ನೇರ ಪರಿಹಾರ ಸೂಚಿಸಲು ಕೇಂದ್ರ ಸಚಿವರಿಗೂ ಸಾಧ್ಯವಾಗಲಿಲ್ಲ. ಆದರೆ, ಇದಕ್ಕೊಂದು ಕಾನೂನಾತ್ಮಕ ಪರಿಹಾರ ನೀಡವ ಬಗ್ಗೆ ಸಚಿವರು ವಾಗ್ದಾನ ನೀಡಿದರು’ ಎಂದು ಚರ್ಚ್‌ನ ಫಾದರ್‌ ಆ್ಯಂಟೊನಿ ತಾರಾಯಿಲ್‌ ಹಾಗೂ ಮುನಂಬಮ್‌ ನಿವಾಸಿಗಳ ಕಾರ್ಯಕಾರಿ ಸಮಿತಿಯ ಮುಖಂಡರು ಹೇಳಿದರು.

ಮುನಂಬಮ್‌ ವಿವಾದವನ್ನೇ ಇಟ್ಟುಕೊಂಡು ಕೇರಳ ಕ್ಯಾಥೋಲಿಕ್‌ ಬಿಷಪ್ಸ್‌ ಕೌನ್ಸಿಲ್‌ ಮತ್ತು ಕ್ಯಾಥೋಲಿಕ್‌ ಬಿಷಪ್ಸ್‌ ಕಾನ್ಫರೆನ್ಸ್‌ ಆಫ್‌ ಇಂಡಿಯಾವು ವಕ್ಫ್‌ (ತಿದ್ದುಪಡಿ) ಕಾಯ್ದೆಯನ್ನು ಬೆಂಬಲಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.