ADVERTISEMENT

ಹನುಮಂತನ ಜನ್ಮಸ್ಥಳ ವಿವಾದ: ತಿರುಮಲ ಅಂಜನಾದ್ರಿ ಅಭಿವೃದ್ಧಿಗೆ ಮುಂದಾದ ಟಿಟಿಡಿ

ಹನುಮಂತನ ಜನ್ಮಸ್ಥಳ ವಿವಾದದ ನಡುವೆಯೇ ಶಂಕುಸ್ಥಾಪನೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2022, 14:11 IST
Last Updated 13 ಫೆಬ್ರುವರಿ 2022, 14:11 IST
ತಿರುಮಲ
ತಿರುಮಲ   

ಹೈದರಾಬಾದ್‌: ಹನುಮಂತನ ಜನ್ಮಸ್ಥಳದ ವಿವಾದದ ನಡುವೆಯೇ, ಆಂಜನೇಯನ ನಿಜವಾದ ಜನ್ಮಸ್ಥಳ ಎಂದು ಕಳೆದ ವರ್ಷ ಘೋಷಿಸಿದ್ದ ತಿರುಮಲ ಅಂಜನಾದ್ರಿಯ ಆಕಾಶಗಂಗೆ ಪ್ರದೇಶವನ್ನು ಭವ್ಯವಾಗಿ ಅಭಿವೃದ್ಧಿಪಡಿಸಲು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮುಂದಾಗಿದೆ.

ಕಿಷ್ಕಿಂದಾ-ಹಂಪಿಯಲ್ಲಿರುವ ಶ್ರೀ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಆಕ್ಷೇಪಣೆಗಳನ್ನು ಬದಿಗಿಟ್ಟು, ‘ಹನುಮಾನ್ ಜನ್ಮ ಭೂಮಿ, ಆಕಾಶಗಂಗಾ’ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಲಾಗುವುದು. ರಾಮಾಯಣಕ್ಕೆ ಸಂಬಂಧಿಸಿದ ಅಯೋಧ್ಯೆ, ಚಿತ್ರಕೂಟ ಇತ್ಯಾದಿ ಸ್ಥಳಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ, ಟಿಟಿಡಿ ತಿರುಮಲ ಬೆಟ್ಟಗಳ ಅಂಜನಾದ್ರಿಯನ್ನು ಹನುಮಾನ್ ಜನ್ಮಸ್ಥಳ ಎಂದು ಘೋಷಿಸಿತ್ತು. ಇದು ಸಾಹಿತ್ಯ, ಪೌರಾಣಿಕ, ಶಾಸನ ಮತ್ತು ವೈಜ್ಞಾನಿಕ, ಭೌಗೋಳಿಕ ಪುರಾವೆಗಳನ್ನು ಆಧರಿಸಿದೆ ಎಂದು ಅದು ಹೇಳಿದೆ.

ADVERTISEMENT

ತಿರುಮಲ ಅಂಜನಾದ್ರಿಯನ್ನು ಹನುಮಂತನ ಜನ್ಮಸ್ಥಳ ಎಂದು ದೃಢಪಡಿಸಲು ಪುರಾಣಗಳು, ಪುರಾತತ್ವ ಮತ್ತು ಇತರ ಪುರಾವೆಗಳನ್ನು ಸಂಶೋಧಿಸಲು ಖ್ಯಾತ ವಿದ್ವಾಂಸರು ಮತ್ತು ಸಂಶೋಧಕರ ಸಮಿತಿಯನ್ನು ಟಿಟಿಡಿ ಈ ಹಿಂದೆ ರಚಿಸಿತ್ತು. ‘ಆಂಜನೇಯನ ಜನ್ಮಸ್ಥಳವಾಗಿ ಜಗತ್ತಿನ ಯಾವುದೇ ಭಾಗವನ್ನು ದೃಢೀಕರಿಸಲು ಯಾವುದೇ ಪುರಾವೆಗಳು ಕಂಡುಬಂದಿಲ್ಲ’ ಎಂದು ಸಮಿತಿಯ ವರದಿ ಹೇಳಿದೆ.

ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಂಪಿಯ ಸ್ಥಳವನ್ನು ಹನುಮಂತನ ಮೂಲಸ್ಥಾನವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಎರಡು ವರ್ಷಗಳ ಹಿಂದೆ ಕಿಷ್ಕಿಂದೆಯ ಟ್ರಸ್ಟ್ ಅನ್ನು ರಚಿಸಲಾಗಿದೆ ಎಂದು ವರದಿಯಾಗಿದೆ. ಈ ಟ್ರಸ್ಟ್‌ನ ಸಂಸ್ಥಾಪಕ ಟ್ರಸ್ಟಿ ಗೋವಿಂದಾನಂದ ಸರಸ್ವತಿ ಅವರು ಟಿಟಿಡಿ ಸಮಿತಿಯ ಸಮರ್ಥನೆಯನ್ನು ಕಟುವಾಗಿ ವಿರೋಧಿಸಿದ್ದಾರೆ.

‘ಹನುಮಂತ ದೇವರಿಗೆ ಸಂಬಂಧಿಸಿದ ಇತರ ಸ್ಥಳಗಳ ಹಕ್ಕುಗಳನ್ನು ಪರಿಶೀಲಿಸಲು ಟಿಟಿಡಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಿತ್ತು. ನಮಗೆ ಅಂತಹ ಅಧಿಕೃತ ಪುರಾವೆಗಳು ಕಂಡುಬಂದಿಲ್ಲ ಮತ್ತು ಜುಲೈನಲ್ಲಿ ನಡೆದ ವೆಬಿನಾರ್‌ನಲ್ಲಿ, ಮಠಾಧೀಶರು, ಪ್ರತಿಷ್ಠಿತ ವಿದ್ವಾಂಸರು ಮತ್ತು ಪ್ರಪಂಚದಾದ್ಯಂತದ ವಿವಿಧ ತಜ್ಞರು ನಮ್ಮ ಸಮಿತಿಯ ಸಂಶೋಧನೆಗಳನ್ನು ಸರ್ವಾನುಮತದಿಂದ ಬೆಂಬಲಿಸಿದ್ದಾರೆ. ಆದ್ದರಿಂದ ಹನುಮಾನ್ ಜನ್ಮಸ್ಥಳದ ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗಿದ್ದೇವೆ’ ಎಂದು ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮ ರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.