ADVERTISEMENT

ಉತ್ತರ ಪ್ರದೇಶ: ಗೋಡೆ ಕುಸಿತದ ಪ್ರತ್ಯೇಕ ಘಟನೆಗಳಲ್ಲಿ 7 ಮಂದಿ ಸಾವು

ಪಿಟಿಐ
Published 21 ಜುಲೈ 2021, 8:31 IST
Last Updated 21 ಜುಲೈ 2021, 8:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸೀತಾಪುರ: ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಸಂಭವಿಸಿದ ಮೇಲ್ಛಾವಣಿ ಮತ್ತು ಗೋಡೆ ಕುಸಿತದ ಪ್ರತ್ಯೇಕ ಘಟನೆಗಳಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಇಬ್ಬರಿಗೆ ಗಾಯಗಳಾಗಿವೆ’ ಎಂದು ಅಧಿಕಾರಿಯೊಬ್ಬರು ಬುಧವಾರ ಹೇಳಿದರು.

‘ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದ ಸುರಿದ ಭಾರಿ ಮಳೆಯಿಂದಾಗಿ ಮೂರು ಕಡೆಗಳಲ್ಲಿ ಮೇಲ್ಛಾವಣಿ ಮತ್ತು ಗೋಡೆ ಕುಸಿತದ ಪ್ರತ್ಯೇಕ ಘಟನೆಗಳು ನಡೆದಿದೆ’ ಎಂದು ಜಿಲ್ಲಾಧಿಕಾರಿ ವಿಶಾಲ್‌ ಭಾರಧ್ವಜ್‌ ಅವರು ತಿಳಿಸಿದರು.

ಈ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಸಂತಾಪ ಸೂಚಿಸಿದ್ದಾರೆ. ಜತೆಗೆ ಸಂತ್ರಸ್ತರಿಗೆ ಎಲ್ಲಾ ರೀತಿಯ ನೆರವುಗಳನ್ನು ಒದಗಿಸುವಂತೆ ಅವರು ನಿರ್ದೇಶನ ನೀಡಿದ್ದಾರೆ.

ADVERTISEMENT

ಲಕ್ಷ್ಮಿನ್‌ಪುರ ಗ್ರಾಮದಲ್ಲಿ ಬುಧವಾರ ಮುಂಜಾನೆ ಸಣ್ಣ ಗುಡಿಸಲು ಮತ್ತು ಗೋಡೆಯೊಂದು ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರಿಗೆ ಗಾಯಗಳಾಗಿವೆ. ನಂಕಾರಿ ಗ್ರಾಮದಲ್ಲೂ ರಾಮ್‌ ಲೊಟನ್‌(42) ಮತ್ತು ಅವರ ಪತ್ನಿ ಅನಿತಾ(38) ಅವರು ಗೋಡೆ ಕುಸಿತದಿಂದಾಗಿ ಸಾವಿಗೀಡಾಗಿದ್ದಾರೆ. ಇನ್ನೊಂದೆಡೆ ಸದಾರ‍ಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಮನೆಯೊಂದರ ಮೇಲ್ಛಾವಣಿ ಕುಸಿದು 60 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ಧಾರೆ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸಂತ್ರಸ್ತರ ಕುಟುಂಬಕ್ಕೆ ತಲಾ ₹4 ಲಕ್ಷ ಪರಿಹಾರ ಧನವನ್ನು ಜಿಲ್ಲಾಧಿಕಾರಿ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.