ಡೆಹ್ರಾಡೂನ್: ಚಳಿಗಾಲದಲ್ಲಿ ಮುಚ್ಚಿದ್ದ ಕೇದಾರನಾಥ ದೇಗುಲದ ಬಾಗಿಲು ತೆರೆಯಲಿದ್ದು, ಮೇ 2ರಿಂದ ಭಕ್ತರಿಗೆ ದರ್ಶನ ಸಿಗಲಿದೆ.
ದೇಗುಲದ ಬಾಗಿಲು ತೆಗೆಯುವುದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಒಂದೆಡೆ ಬಿರುಸಿನಿಂದ ನಡೆದಿದ್ದರೆ, ಮತ್ತೊಂದೆಡೆ ಉಖಿ ಮಠದಲ್ಲಿದ್ದ ಶಿವನ ಮೂರ್ತಿಗೆ ಸೋಮವಾರ ವಿಶೇಷ ಪೂಜೆ ಸಲ್ಲಿಸಿ, ಹೂವಿನ ಪಲ್ಲಕ್ಕಿಯಲ್ಲಿ ಬೀಳ್ಕೊಡಲಾಯಿತು.
ಚಳಿಗಾಲದಲ್ಲಿ ಉಖಿಮಠದ ಓಂಕಾರೇಶ್ವರ ದೇಗುಲದಲ್ಲಿ ಬಾಬಾ ಕೇದಾರನಾಥನನ್ನು (ಶಿವ) ಪೂಜಿಸಲಾಗುತ್ತದೆ. ಬಾಗಿಲನ್ನು ವಿಧ್ಯುಕ್ತವಾಗಿ ತೆರೆಯುವ ಮುನ್ನ ಕೇದಾರನಾಥ ದೇಗುಲಕ್ಕೆ ಮೂರ್ತಿಯನ್ನು ವಾಪಸ್ ಕೊಂಡೊಯ್ಯಲಾಗುತ್ತದೆ.
ಸೇನೆಯ ವಾದ್ಯ ತಂಡದ ಭಕ್ತಿ ಗೀತೆಗಳ ಮೊಳಗಿಸುವಿಕೆ ಯೊಂದಿಗೆ, ಬದರಿನಾಥ–ಕೇದಾರನಾಥ ದೇವಾಲಯ ಸಮಿತಿಯ (ಬಿಕೆಟಿಸಿ) ಅರ್ಚಕರು, ವೇದಪತಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತರು ತಮ್ಮ ಹೆಗಲ ಮೇಲೆ ಪಂಚಮುಖಿ ಡೋಲಿಯಲ್ಲಿ (ಹೂವಿನಿಂದ ಅಲಂಕೃತವಾಗಿದ್ದ ಪಲ್ಲಕ್ಕಿ) ಶಿವನ ಮೂರ್ತಿಯನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು.
ರಾತ್ರಿ ವೇಳೆ ಗುಪ್ತಕಾಶಿ, ಫಾಟಾ ಹಾಗೂ ಗೌರಿಕುಂಡ್‌ನಲ್ಲಿ ವಾಸ್ತವ್ಯ ಹೂಡಲಿರುವ ಮೆರವಣಿಗೆಯು ಮೇ 1ರ ತಡರಾತ್ರಿ ಕೇದಾರನಾಥವನ್ನು ತಲುಪಲಿದೆ. ಮೇ 2ರ ಬೆಳಿಗ್ಗೆ 7 ಗಂಟೆಗೆ ದೇಗುಲದ ದ್ವಾರಗಳನ್ನು ತೆರೆಯಲಾಗುವುದು ಎಂದು ಬಿಕೆಟಿಸಿ ಮಾಧ್ಯಮ ಉಸ್ತುವಾರಿ ಹರೀಶ್ ಗೌರ್ ತಿಳಿಸಿದ್ದಾರೆ.
ಕಳೆದ ವರ್ಷ 48 ಲಕ್ಷ ಯಾತ್ರಿಕರು ಚಾರ್ ಧಾಮ್ ಯಾತ್ರೆಯಲ್ಲಿ ಭಾಗಿಯಾಗಿದ್ದರೆ, ಪ್ರಸ್ತುತ ವರ್ಷ ಈ ಸಂಖ್ಯೆ 60 ಲಕ್ಷ ತಲುಪುವ ನಿರೀಕ್ಷೆಯಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.