ADVERTISEMENT

ಬಿಜೆಪಿ ವಕ್ತಾರನ ಮೇಲೆ ಶೂ ಎಸೆತ

ದೆಹಲಿ: ಸುದ್ದಿಗೋಷ್ಠಿಯಲ್ಲಿ ನಡೆದ ಘಟನೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 18:49 IST
Last Updated 18 ಏಪ್ರಿಲ್ 2019, 18:49 IST

ನವದೆಹಲಿ: ಬಿಜೆಪಿ ಕೇಂದ್ರ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸುತ್ತಿದ್ದ ಪಕ್ಷದ ವಕ್ತಾರ ಜಿವಿಎನ್ ನರಸಿಂಹರಾವ್ ಅವರ ಮೇಲೆ ವ್ಯಕ್ತಿಯೊಬ್ಬ ಶೂ ಎಸೆದಿದ್ದಾನೆ.

ಶೂ ಎಸೆದ ಕಾನ್ಪುರದ ವೈದ್ಯ ಶಕ್ತಿ ಭಾರ್ಗವ ಎಂಬಾತನನ್ನು ಭದ್ರತಾ ಪಡೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಶೂ ಎಸೆಯಲು ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಮಾಲೇಂಗಾವ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಅವರಿಗೆ ಟಿಕೆಟ್ ನೀಡಿದ ಬಿಜೆಪಿ ನಿರ್ಧಾರವನ್ನು ಅವರು ವಿರೋಧಿಸಿದ್ದರು ಎನ್ನಲಾಗಿದೆ.

ADVERTISEMENT

ರಾವ್ ಅವರು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ‘ಪ್ರಜ್ಞಾ ಸಿಂಗ್ ಠಾಕೂರ್ ಸೇರಿದಂತೆ ಹಿಂದುತ್ವವಾದಿ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಕಾಂಗ್ರೆಸ್ ಹಿಂದೂಗಳಿಗೆ ಅಪಮಾನ ಮಾಡುತ್ತಿದೆ’ ಎಂದು ರಾವ್ ಆರೋಪಿಸಿದರು. ಶೂ ದಾಳಿಯನ್ನು ಖಂಡಿಸಿದ ರಾವ್, ‘ಕಾಂಗ್ರೆಸ್ ಮನೋಸ್ಥಿತಿಯನ್ನು ವ್ಯಕ್ತಪಡಿಸಲು ಆ ವ್ಯಕ್ತಿ ಇಲ್ಲಿಗೆ ಬಂದಿದ್ದ’ ಎಂದು ಹೇಳಿದ್ದಾರೆ. 2009ರ ಚುನಾವಣೆಯಲ್ಲಿ ಶೂ ಎಸೆತದ ಘಟನೆಗಳು ನಡೆದಿದ್ದವು. ಸಿಖ್ ವಿರೋಧಿ ದಂಗೆಯ ಆರೋಪಿಗಳಾದ ಸಜ್ಜನ್ ಕುಮಾರ್ ಮತ್ತು ಜಗದೀಶ್ ಟೈಟ್ಲರ್ ಅವರಿಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಅವರ ಮೇಲೆ ಪತ್ರಕರ್ತ ಜರ್ನೈಲ್ ಸಿಂಗ್ ಎಂಬಾತ ಶೂ ಎಸೆದಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.