ADVERTISEMENT

ದೆಹಲಿಗೆ ರಾಜಪಕ್ಸೆ

ಪಿಟಿಐ
Published 28 ನವೆಂಬರ್ 2019, 18:48 IST
Last Updated 28 ನವೆಂಬರ್ 2019, 18:48 IST
ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರನ್ನು ಕೇಂದ್ರ ಸಚಿವ ವಿ.ಕೆ. ಸಿಂಗ್‌ ಅವರು ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು
ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರನ್ನು ಕೇಂದ್ರ ಸಚಿವ ವಿ.ಕೆ. ಸಿಂಗ್‌ ಅವರು ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು   

ನವದೆಹಲಿ: ಶ್ರೀಲಂಕಾ ಅಧ್ಯಕ್ಷರಾಗಿ ವಾರದ ಹಿಂದೆ ಅಧಿಕಾರ ವಹಿಸಿಕೊಂಡಿರುವ ಗೊಟಬಯ ರಾಜಪಕ್ಸೆ ಅವರು ಮೂರು ದಿನಗಳ ಭೇಟಿಗಾಗಿ ದೆಹಲಿಗೆ ಗುರುವಾರ ಬಂದಿದ್ದಾರೆ. ಅಧ್ಯಕ್ಷರಾದ ಬಳಿಕ ಅವರ ಮೊದಲ ವಿದೇಶ ಭೇಟಿ ಇದು. ಭಾರತದ ಜತೆಗೆ ದ್ವಿಪಕ್ಷೀಯ ಸಂಬಂಧವನ್ನು ಉತ್ತಮಪಡಿಸುವ ಇಚ್ಛೆ ಅವರಿಗೆ ಇದೆ ಎಂಬುದರ ಸೂಚನೆ ಇದು ಎಂದು ಹೇಳಲಾಗಿದೆ.ರಾಜಪಕ್ಸೆ ಅವರು ಚೀನಾ ಪರವಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಹಾಗಾಗಿ, ಈ ಭೇಟಿಗೆ ಹೆಚ್ಚಿನ ಮಹತ್ವ ಬಂದಿದೆ.

ರಾಜಪಕ್ಸೆ ಅವರು ಪ್ರಧಾನಿ ನರೇಂದ್ರ ಮೋದಿ ಜತೆಗೆ ಶುಕ್ರವಾರ ಮಾತುಕತೆ ನಡೆಸಲಿದ್ದಾರೆ.

ಶ್ರೀಲಂಕಾದಲ್ಲಿರುವ ತಮಿಳು ಸಮುದಾಯದ ಆಕಾಂಕ್ಷೆಗಳ ಈಡೇರಿಕೆ, ಹಿಂದೂ ಮಹಾಸಾಗರದಲ್ಲಿನ ಪರಿಸ್ಥಿತಿ, ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ವಿಸ್ತರಣೆಯಂತಹ ವಿಚಾರಗಳ ಬಗ್ಗೆ ಇಬ್ಬರು ನಾಯಕರು ಚರ್ಚೆ ನಡೆಸಲಿದ್ದಾರೆ.

ADVERTISEMENT

ಪ‍್ರಧಾನಿ ಮೋದಿ ಅವರ ವಿಶೇಷ ಪ್ರತಿನಿಧಿಯಾಗಿ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಕಳೆದ ವಾರ ಕೊಲಂಬೊಕ್ಕೆ ಭೇಟಿ ನೀಡಿ ರಾಜಪಕ್ಸೆ ಅವರಿಗೆ ಅಭಿನಂದನೆ ಸಲ್ಲಿಸಿದ್ದರು. ರಾಜಪಕ್ಸೆ ಅವರು ಭಾರತಕ್ಕೆ ಭೇಟಿ ನೀಡುವ ವಿಚಾರ ಆ ಸಂದರ್ಭದಲ್ಲಿಯೇ ಅಂತಿಮಗೊಂಡಿತ್ತು.

ರಾಜಪಕ್ಸೆ ಅವರು ಬಹುಸಂಖ್ಯಾತ ಸಿಂಹಳೀಯರ ಬೆಂಬಲದಿಂದಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಾಗಾಗಿ, ಅವರು ಬಹುಸಂಖ್ಯಾತರನ್ನು ಓಲೈಸುವ ರಾಜಕಾರಣ ಮಾಡಬಹುದು ಎಂಬ ಭೀತಿ ಅಲ್ಲಿನ ಅಲ್ಪಸಂಖ್ಯಾತ ತಮಿಳರು ಮತ್ತು ಮುಸ್ಲಿಮರಲ್ಲಿ ಇದೆ. ಅಧ್ಯಕ್ಷರಾದ ಬಳಿಕ ಮೊದಲಿಗೆ ಅವರು ಭಾರತಕ್ಕೆ ಭೇಟಿ ನೀಡಿರುವುದು ತಮಿಳರಲ್ಲಿ ಸುರಕ್ಷತೆಯ ಭಾವ ಮೂಡಿಸಬಹುದು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.