ADVERTISEMENT

ಸ್ಥಳೀಯರಿಗೆ ಸರ್ಕಾರ ಶೇ 100ರಷ್ಟು ಮೀಸಲಾತಿ ಕಲ್ಪಿಸಲು ಸಾಧ್ಯವಿಲ್ಲ -ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 16:27 IST
Last Updated 2 ಆಗಸ್ಟ್ 2022, 16:27 IST
ಸುಪ್ರೀಂ
ಸುಪ್ರೀಂ   

ನವದೆಹಲಿ: ‘ರಾಜ್ಯ ಸರ್ಕಾರವು ನಿರ್ದಿಷ್ಟ ಪ್ರದೇಶದಲ್ಲಿ ನೆಲೆಸಿರುವ ಅಭ್ಯರ್ಥಿಗಳಿಗೆ ಉದ್ಯೋಗದಲ್ಲಿ ಶೇ 100ರಷ್ಟು ಮೀಸಲಾತಿ ಕಲ್ಪಿಸಲು ಸಾಧ್ಯವಿಲ್ಲ. ಹಾಗೇನಾದರು ಮಾಡಿದರೆ ಅದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗಲಿದೆ’ ಎಂದು ಸುಪ್ರೀಂಕೋರ್ಟ್‌ ಮಂಗಳವಾರ ಹೇಳಿದೆ.

‘ನಿರ್ದಿಷ್ಟ ವರ್ಗಕ್ಕೆ ಅವಕಾಶ ಕಲ್ಪಿಸುವ ಸಲುವಾಗಿ ಇತರರನ್ನು ಕಡೆಗಣಿಸುವುದು ಸರಿಯಲ್ಲ. ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾದುದು. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳಿವೆ’ ಎಂದು ನ್ಯಾಯಮೂರ್ತಿ ಎಂ.ಆರ್‌.ಶಾ ಹಾಗೂ ಬಿ.ವಿ.ನಾಗರತ್ನ ಅವರಿದ್ದ ಪೀಠವು ತಿಳಿಸಿದೆ.

‘ನಿರ್ದಿಷ್ಟ ಜಿಲ್ಲೆ ಅಥವಾ ಪ್ರದೇಶದ ನಿವಾಸಿಗಳಿಗೆ ಶೇ 100ರಷ್ಟು ಮೀಸಲಾತಿ ಒದಗಿಸುವುದು ಸಂವಿಧಾನದ ವಿಧಿ 16 (2)ರ ಉಲ್ಲಂಘನೆ ಮಾಡಿದಂತೆ. ಇತರ ಅಭ್ಯರ್ಥಿಗಳು ಅಥವಾ ನಾಗರಿಕರ ಹಕ್ಕುಗಳಿಗೆ ಇದರಿಂದ ಚ್ಯುತಿ ಉಂಟಾಗಲಿದೆ’ ಎಂದು ನ್ಯಾಯಮೂರ್ತಿ ಶಾ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಜಿಲ್ಲಾ ಮಟ್ಟದ 3 ಮತ್ತು 4ನೇ ದರ್ಜೆಯ ಹುದ್ದೆಗಳ ನೇಮಕಾತಿಯಲ್ಲಿ ಸ್ಥಳೀಯರಿಗೆ ಶೇ 100ರಷ್ಟು ಮೀಸಲಾತಿ ಕಲ್ಪಿಸುವ ಸಂಬಂಧ ಜಾರ್ಖಂಡ್‌ ಸರ್ಕಾರ 2016ರಲ್ಲಿ ಹೊರಡಿಸಿದ್ದ ಆದೇಶವನ್ನು ನ್ಯಾಯಾಲಯ ವಜಾಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.