ADVERTISEMENT

ಎನ್‌ಸಿಐಎಸ್‌ಎಂಸಿ ಮುಖ್ಯಸ್ಥರ ವಜಾ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ಪಿಟಿಐ
Published 10 ಜೂನ್ 2025, 13:40 IST
Last Updated 10 ಜೂನ್ 2025, 13:40 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಹುದ್ದೆಗೆ ಅನರ್ಹ ಎಂಬ ಕಾರಣದ ಮೇಲೆ ಭಾರತೀಯ ವೈದ್ಯಕೀಯ ಪದ್ಧತಿಯ ರಾಷ್ಟ್ರೀಯ ಆಯೋಗದ (ಎನ್‌ಸಿಐಎಸ್‌ಎಂಸಿ) ಮುಖ್ಯಸ್ಥರ ನೇಮಕಾತಿಯನ್ನು ರದ್ದು ಮಾಡಿದ್ದ ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ. 

ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಮನ್‌ಮೋಹನ್ ಅವರು ಇದ್ದ ಪೀಠವು ವೈದ್ಯ ಜಯಂತ್ ಯಶವಂತ್ ದೇವ್‌ ಪೂಜಾರಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಎನ್‌ಸಿಐಎಸ್‌ಎಂಸಿಗೆ ನೋಟಿಸ್ ಜಾರಿ ಮಾಡಿದೆ.

ದೇವ್‌ ಪೂಜಾರಿ ಅವರನ್ನು ಆಯೋಗದ ಮುಖ್ಯಸ್ಥರನ್ನಾಗಿ ನೇಮಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಎರಡು ಅರ್ಜಿಗಳ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್‌ ಜೂನ್ 6ರಂದು ಆದೇಶ ನೀಡಿತ್ತು.

ADVERTISEMENT

ಎನ್‌ಸಿಐಎಸ್‌ಎಂ ಕಾಯ್ದೆಯ ಪ್ರಕಾರ, ಆಯೋಗದ ಅಧ್ಯಕ್ಷ ಹುದ್ದೆಗೆ ಅರ್ಹತೆ ಪಡೆಯಲು ಸ್ನಾತಕೋತ್ತರ ಪದವಿ ಹೊಂದಿರುವುದು ಕಡ್ಡಾಯ ಎಂಬ ನಿಯಮ ಇದೆ. ದೇವ್‌ ಪೂಜಾರಿ ಈ ಅರ್ಹತೆ ಹೊಂದಿಲ್ಲ. ಆಯೋಗದ ನಿಯಮಗಳಿಗೆ ವಿರುದ್ಧವಾಗಿ ದೇವ್ ಪೂಜಾರಿ ನೇಮಕ ನಡೆದಿದೆ ಎಂದು ವೇದ ಪ್ರಕಾಶ್ ತ್ಯಾಗಿ, ಡಾ.ರಘುನಂದನ್ ಶರ್ಮಾ ಎಂಬುವರು ಅರ್ಜಿ ಸಲ್ಲಿಸಿದ್ದರು.

ಸ್ನಾತಕೋತ್ತರ ಪದವಿ ಪಡೆಯದೇ ಆಯುರ್ವೇದ ಪದವಿ ನಂತರ ಪಿಹೆಚ್‌ಡಿ ಮಾಡಿರುವುದನ್ನು ದೇವ್‌ಪೂಜಾರಿ ಹೈಕೋರ್ಟ್‌ಗೆ ತಿಳಿಸಿದ್ದರು. ಹೀಗಾಗಿ ದೇವ್‌ ಪೂಜಾರಿ ಅವರ ನೇಮಕಾತಿ ಆದೇಶವನ್ನು ದೆಹಲಿ ಹೈಕೋರ್ಟ್ ವಜಾ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.