ADVERTISEMENT

ಬಿಜೆಪಿಗೆ ಮರುಜೀವ ನೀಡಿದ ‘ದಾಳಿ’

ಪುಲ್ವಾಮಾ ಘಟನೆ ನಂತರ ಮುಜುಗರ ಅನುಭವಿಸಿದ್ದ ಪಕ್ಷಕ್ಕೆ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2019, 20:00 IST
Last Updated 26 ಫೆಬ್ರುವರಿ 2019, 20:00 IST

ನವದೆಹಲಿ: ಪುಲ್ವಾಮಾ ದಾಳಿಯ ನಂತರ ತೀವ್ರ ಒತ್ತಡಕ್ಕೆ ಸಿಲುಕಿದ್ದ ಬಿಜೆಪಿಯ ಉತ್ಸಾಹ ಎರಡನೇ ನಿರ್ದಿಷ್ಟ ದಾಳಿಯ ನಂತರ ಇಮ್ಮಡಿಸಿದೆ.

ಭಾರತದ ವೈಮಾನಿಕ ದಾಳಿಯ ಸುದ್ದಿ ತಿಳಿಯುತ್ತಲೇ ಬೀದಿಗಿಳಿದ ಬಿಜೆಪಿಯ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಗುಣಗಾನದಲ್ಲಿ ತೊಡಗಿದ್ದಾರೆ.

ಲೋಕಸಭೆ ಚುನಾವಣೆಗೆ ಇನ್ನೂ ಎರಡು ತಿಂಗಳು ಬಾಕಿ ಇರುವಾಗ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ನಡೆದ ಆತ್ಮಾಹುತಿ ದಾಳಿಯಿಂದ ಬಿಜೆಪಿಗೆ ಬರಸಿಡಿಲು ಬಡಿದಂತಾಗಿತ್ತು.

ADVERTISEMENT

ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ವಿಫಲರಾದ ಮನಮೋಹನ್‌ ಸಿಂಗ್‌ ಅವರನ್ನು ದುರ್ಬಲ ಪ್ರಧಾನಿ ಎಂದು ಟೀಕಿಸಿದ್ದ ಬಿಜೆಪಿಗೆ ಪುಲ್ವಾಮಾ ಘಟನೆ ನುಂಗಲಾರದ ತುತ್ತಾಗಿತ್ತು.

ಉರಿ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಮೋದಿ ನೇತೃತ್ವದ ಸರ್ಕಾರ 2016ರಲ್ಲಿ ನಡೆದ ನಡೆಸಿದ್ದ ನಿರ್ದಿಷ್ಟ ದಾಳಿಯ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಣಾಮಕಾರಿ ಬದಲಾವಣೆಯಾಗಿರಲಿಲ್ಲ. ಉಗ್ರರ ಒಳ ನುಸುಳುವಿಕೆ ಮತ್ತು ವಿಧ್ವಂಸಕ ಕೃತ್ಯಗಳಿಗೆ ಕಡಿವಾಣ ಬಿದ್ದಿರಲಿಲ್ಲ.

ಪುಲ್ವಾಮಾ ಘಟನೆಯಿಂದಾಗಿ ವಿರೋಧ ಪಕ್ಷಗಳಿಗೆ ಮೋದಿ ವಿರುದ್ಧ ಪ್ರಯೋಗಿಸಲು ಹೊಸ ಅಸ್ತ್ರವೊಂದು ದೊರೆತಂತಾಗಿತ್ತು. ಎರಡನೇ ನಿರ್ದಿಷ್ಟ ದಾಳಿಯ ನಂತರ ಬಿಜೆಪಿಯು ‘ಮೋದಿಯಂತಹ ಸದೃಢ ನಾಯಕನ ಕೈಯಲ್ಲಿ ಭಾರತದ ಭವಿಷ್ಯ
ಸುರಕ್ಷಿತ ಮತ್ತು ಭದ್ರವಾಗಿದೆ’ ಎಂದು ಹೊಸ ಘೋಷಣೆ ಶುರುವಿಟ್ಟುಕೊಂಡಿದೆ.

ನಿರ್ದಿಷ್ಟ ದಾಳಿಯನ್ನು ‘ನವ ಭಾರತದ ಉದಯ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಬಣ್ಣಿಸಿದ್ದಾರೆ.

‘ನಮ್ಮ ನವ ಭಾರತ ಉಗ್ರರು ಮತ್ತು ಅವರ ಪೋಷಕರನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಗುಡುಗಿದ್ದಾರೆ.

ಕಂದಹಾರ ಕಳಂಕ ತೊಳೆಯುವ ಯತ್ನ

1999ರಲ್ಲಿ ಕಂದಹಾರ ವಿಮಾನ ಅಪಹರಣವಾದ ಬಳಿಕ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಜೈಷ್‌ –ಎ–ಮೊಹಮ್ಮದ್‌ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಬಿಡುಗಡೆ ಮಾಡಿತ್ತು.

ಸರ್ಕಾರದ ಈ ನಿರ್ಧಾರಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಪಂಜಾಬ್‌ನ ಕಾಂಗ್ರೆಸ್‌ ಸಚಿವ ನವಜ್ಯೋತ್‌ ಸಿಂಗ್‌ ಸಿಧು ಕೂಡ ಪದೇ ಪದೇ ಮಸೂದ್‌ ಬಿಡುಗಡೆ ಮಾಡಿದ್ದು ಎನ್‌ಡಿಎ ಸರ್ಕಾರ ಎಂದು ಬಿಜೆಪಿಗೆ ತಿರುಗೇಟು ನೀಡುತ್ತಿದ್ದರು. 1971ರ ಭಾರತ–ಪಾಕಿಸ್ತಾನ ಯುದ್ಧದ ನಂತರ ಮೊದಲ ಬಾರಿಗೆ ಗಡಿ ದಾಟಿ ವೈಮಾನಿಕ ದಾಳಿ ನಡೆಸಿದ ಶ್ರೇಯಸ್ಸು ಮೋದಿ ನೇತೃತ್ವದ ಸರ್ಕಾರಕ್ಕೆ ಸಲ್ಲಬೇಕು ಎಂದು ಬಿಜೆಪಿ ಪ್ರಚಾರ ಮಾಡುತ್ತಿದೆ.

ಮೋದಿ ನಾಯಕತ್ವ ಪ್ರಮುಖ ವಿಷಯ

ಪ್ರಧಾನಿ ನರೇಂದ್ರ ಮೋದಿ ‘ದೃಢ ನಾಯಕತ್ವ’ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿ 2019ರ ಲೋಕಸಭಾ ಚುನಾವಣೆ ಎದುರಿಸಲಿದೆ ಎಂಬ ಸುಳಿವನ್ನು ಹಣಕಾಸು ಸಚಿವ ಅರುಣ್‌ ಜೇಟ್ಲಿ ನೀಡಿದ್ದಾರೆ.

ದಾಳಿಯ ನಂತರ ಬಿಜೆಪಿಯು ಮೋದಿ ಅವರನ್ನು ‘ಅತ್ಯಂತ ವಿಶ್ವಾಸಾರ್ಹ ನಾಯಕ’ ಎಂದು ಬಿಂಬಿಸಲು ಪ್ರಯತ್ನ ಮಾಡುತ್ತಿದೆ. ಎರಡನೇ ನಿರ್ದಿಷ್ಟ ದಾಳಿಯ ನಂತರ ಬಿಜೆಪಿ ಮತ್ತೆ ‘ರಾಷ್ಟ್ರೀಯತೆ’ ಮಂತ್ರವನ್ನು ಮುನ್ನಲೆಗೆ ತಂದಿದೆ. ಪಾಕಿಸ್ತಾನದ ವಿರುದ್ಧ ಜನರಲ್ಲಿ ಮಡುಗಟ್ಟಿರುವ ಆಕ್ರೋಶವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಬಿಜೆಪಿ ತಂತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.