ADVERTISEMENT

ಇಡೀ ಹಳ್ಳಿಯಲ್ಲಿ ಸ್ವಾತಂತ್ರ್ಯಾ ನಂತರ 10ನೇ ತರಗತಿ ಪಾಸಾದ ಮೊದಲಿಗ

ಪಿಟಿಐ
Published 5 ಮೇ 2025, 13:55 IST
Last Updated 5 ಮೇ 2025, 13:55 IST
   

ಬಾರಾಬಂಕಿ: ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಹಳ್ಳಿಯೊಂದರಲ್ಲಿ ವಿದ್ಯಾರ್ಥಿಯೊಬ್ಬ 10ನೇ ತರಗತಿ ಪರೀಕ್ಷೆಯಲ್ಲಿ ಪಾಸಾಗಿದ್ದಾನೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ 77 ವರ್ಷಗಳ ನಂತರ ಈ ಗ್ರಾಮದ ವಿದ್ಯಾರ್ಥಿಯೊಬ್ಬ 10ನೇ ತರಗತಿ ಬೋರ್ಡ್‌ ಪರೀಕ್ಷೆಯಲ್ಲಿ ಪಾಸಾಗುತ್ತಿರುವುದು ಇದೇ ಮೊದಲು.

ಜಿಲ್ಲಾ ಕೇಂದ್ರದಿಂದ 30 ಕಿ.ಮೀ. ದೂರದಲ್ಲಿರುವ ಹಳ್ಳಿ ನಿಜಾಮಪುರ. ಬಹುತೇಕ ದಲಿತರೇ ವಾಸವಿರುವ ಇಲ್ಲಿನ ವಿದ್ಯಾರ್ಥಿ ರಾಮಕೇವಲ್‌ ಈ ಸಾಧನೆ ಮಾಡಿದವ. ಈತನ ಕುಟುಂಬವು ಆರ್ಥಿಕವಾಗಿ ಹಿಂದುಳಿದಿದೆ. ಖುದ್ದು ಅವನೂ ಕೂಲಿ ಕೆಲಸ ಮಾಡುತ್ತಲೇ ಓದಿ, ಪರೀಕ್ಷೆ ಪಾಸಾಗಿದ್ದಾನೆ. 

ಮದುವೆ ಸಮಾರಂಭ ನಡೆವಾಗ ದೀಪ ಹೊತ್ತೊಯ್ಯುವ ಕೆಲಸ ಮಾಡಿ, ₹250–₹300 ಕೂಲಿ ಪಡೆಯುತ್ತಿದ್ದುದಾಗಿ ಅವನು ಹೇಳಿದ್ದಾನೆ.

ADVERTISEMENT

‘ಕೂಲಿ ಮುಗಿಸಿ ಮನೆಗೆ ಬರುವಷ್ಟರಲ್ಲಿ ತಡರಾತ್ರಿಯಾಗಿರುತ್ತಿತ್ತು. ಆದರೂ ಎರಡು ಗಂಟೆ ಅಭ್ಯಾಸ ಮಾಡಿ, ಆಮೇಲೆ ಮಲಗುತ್ತಿದ್ದೆ. ಎಂದಿಗೂ 10ನೇ ತರಗತಿ ಪರೀಕ್ಷೆ ಪಾಸಾಗಲು ನನಗೆ ಆಗದು ಎಂದೇ ಗ್ರಾಮದ ಕೆಲವರು ಕುಹಕವಾಡುತ್ತಿದ್ದರು’ ಎಂದು ರಾಮಕೇವಲ್‌ ಭಾವುಕನಾಗಿ ಪ್ರತಿಕ್ರಿಯಿಸಿದ್ದಾನೆ.

ರಾಮಕೇವಲ್‌ನ ತಾಯಿ ಪುಷ್ಪಾ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟಕ್ಕೆ ಅಡುಗೆ ಮಾಡುವ ಕೆಲಸ ನಿರ್ವಹಿಸುತ್ತಾರೆ. ಅವರು 5ನೇ ತರಗತಿಯವರೆಗೆ ಮಾತ್ರ ಓದಿದ್ದರು. ತಂದೆ ಜಗದೀಶ್ ಅವರಿಗೂ ಓದಲು ಆಗಿರಲಿಲ್ಲ. ಅವರ ಜೊತೆಗೇ ರಾಮಕೇವಲ್ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ತಂದೆಯೂ ಓದಲು ಅವನಿಗೆ ಉತ್ತೇಜನ ನೀಡುತ್ತಿದ್ದರು. 

ಜಿಲ್ಲಾಧಿಕಾರಿ ಶಶಾಂಕ್‌ ತ್ರಿಪಾಠಿ ಅವರು ಈ ವಿದ್ಯಾರ್ಥಿಯ ಸಾಧನೆಯನ್ನು ಗುರುತಿಸಿ, ಸನ್ಮಾನಿಸಿದ್ದಾರೆ. ಆತನ ಶಿಕ್ಷಣಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. 

ಶಿಕ್ಷಣಾಧಿಕಾರಿ (ಡಿಐಒಎಸ್) ಒ.ಪಿ. ತ್ರಿಪಾಠಿ, ‘ರಾಮಕೇವಲ್ 10ನೇ ತರಗತಿ ಪಾಸಾಗುವ ಮೂಲಕ ಊರಿನ ಒಂದು ಪೀಳಿಗೆಗೇ ದಾರಿದೀಪವಾಗಿದ್ದಾನೆ. ಅವನ ಮುಂದಿನ ಓದಿಗೆ ಎಲ್ಲ ರೀತಿಯ ನೆರವು ನೀಡುತ್ತೇವೆ’ ಎಂದಿದ್ದಾರೆ. 

ಇತರರಿಗೆ ಸ್ಫೂರ್ತಿ ಹೈಸ್ಕೂಲು ಮೆಟ್ಟಿಲು ಹತ್ತಿದ
ಎಷ್ಟೋ ಜನರು ತುತ್ತೂಟಕ್ಕೆ ಕೂಲಿಗೆ ಹೋಗುವ ಅನಿವಾರ್ಯಕ್ಕೆ ಒಳಗಾಗಿ ಈ ಹಳ್ಳಿಯಲ್ಲಿ ಓದನ್ನು ಮುಂದುವರಿಸಲು ಆಗಲೇ ಇಲ್ಲ. ಬಹುತೇಕ ವಿದ್ಯಾರ್ಥಿಗಳಿಗೆ ಕೂಲಿ ಕೆಲಸವನ್ನೂ ಮಾಡಿಕೊಂಡು ಪರೀಕ್ಷೆಯಲ್ಲಿ ಪಾಸಾಗುವುದು ಸವಾಲೇ ಆಗಿತ್ತು. ಹೀಗಾಗಿ ರಾಮಕೇವಲ್‌ನ ಸಾಧನೆಯು ಗ್ರಾಮದ ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿದೆ ಎಂದು ಗ್ರಾಮಸ್ಥರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ. 10ನೇ ತರಗತಿ ಪರೀಕ್ಷೆ ಬರೆದಿದ್ದರೂ ಫೇಲಾಗಿರುವ ಲವಕೇಶ್ ಮುಕೇಶ್ ಎಂಬಿಬ್ಬರು ಈ ಹುಡುಗನ ಸಾಧನೆಯಿಂದ ಪ್ರೇರಣೆ ಪಡೆದು ಮತ್ತೆ ಪರೀಕ್ಷೆ ಕಟ್ಟಲು ನಿರ್ಧರಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.