ಪ್ರಾತಿನಿಧಿಕ ಚಿತ್ರ
ಮುಂಬೈ: ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡಿರುವ ಆರೋಪದಲ್ಲಿ ಬಂಧಿತರಾಗಿರುವ ಠಾಣೆ ಮೂಲದ ಎಂಜಿನಿಯರ್ ರವೀಂದ್ರ ವರ್ಮಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ದೀರ್ಘಕಾಲ ಜೈಲಿನಲ್ಲಿದ್ದರೆ ತನ್ನ ವೈಯಕ್ತಿಕ ಹಾಗೂ ವೃತ್ತಿ ಬದುಕಿಗೆ ಹಾನಿಯಾಗಲಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿ, ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದ್ದಾರೆ.
ರಕ್ಷಣಾ ತಾಂತ್ರಿಕ ಸಂಸ್ಥೆಯೊಂದರ ಉದ್ಯೋಗಿಯಾಗಿರುವ ವರ್ಮಾ, ಪಾಕಿಸ್ತಾನದ ಗುಪ್ತಚರ ಸಂಸ್ಥೆಯೊಂದಿಗೆ ಭಾರತದ ಯುದ್ಧನೌಕೆ ಹಾಗೂ ಜಲಾಂತರ್ಗಾಮಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಂಡಿರುವ ಆರೋಪ ಎದುರಿಸುತ್ತಿದ್ದಾರೆ. ಈ ಆರೋಪದಡಿ ಮೇ 28ರಂದು ಮಹಾರಾಷ್ಟ್ರದ ಭಯೋತ್ಪಾದನ ನಿಗ್ರಹ ದಳ (ಎಟಿಎಸ್) ವರ್ಮಾ ಅವರನ್ನು ಬಂಧಿಸಿದ್ದು, ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಠಾಣೆಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಜಾಮೀನು ಕೋರಿ ವರ್ಮಾ ಅರ್ಜಿ ಸಲ್ಲಿಸಿದ್ದಾರೆ. ತಾನು ನಿರಾಪರಾಧಿ ಎಂದು ಪ್ರತಿಪಾದಿಸಿರುವ ಅವರು,‘ ಪ್ರಕರಣದ ವಿಚಾರಣೆ ಬಹುತೇಕ ಪೂರ್ಣಗೊಂಡಿದ್ದು, ಪ್ರಾಥಮಿಕ ಸಾಕ್ಷ್ಯಗಳಾಗಿ ನನ್ನ ಮೊಬೈಲ್ ಸೇರಿದಂತೆ ಎಲ್ಲವೂ ಪೊಲೀಸರ ವಶದಲ್ಲಿವೆ. ಹೀಗಾಗಿ ನನ್ನನ್ನು ನ್ಯಾಯಾಂಗ ಬಂಧನದಿಂದ ಬಿಡುಗಡೆಗೊಳಿಸಿ, ಜಾಮೀನು ಮಂಜೂರು ಮಾಡಬೇಕು‘ ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.