ADVERTISEMENT

ಮೇಲ್ಜಾತಿ ಮೀಸಲು: ಕೇಂದ್ರ ಸರ್ಕಾರಕ್ಕೆ ನೋಟಿಸ್‌

ಪಿಟಿಐ
Published 25 ಜನವರಿ 2019, 17:25 IST
Last Updated 25 ಜನವರಿ 2019, 17:25 IST
   

ನವದೆಹಲಿ: ಮೇಲ್ಜಾತಿಗಳ ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪರಿಶೀಲನೆಗೆ ಒಳಪಡಿಸಲು ಸುಪ್ರೀಂ ಕೋರ್ಟ್‌ ಒಪ್ಪಿದೆ.

ಮೀಸಲಾತಿ ನೀಡುವುದಕ್ಕಾಗಿ ಸಂವಿಧಾನ (103ನೇ ತಿದ್ದುಪಡಿ) ಕಾಯ್ದೆ 2019ರ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠವು ವಿಚಾರಣೆ ನಡೆಸಿತು.

ಪೀಠವು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ್ದು, ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡಲು ಸೂಚಿಸಿದೆ. ಆದರೆ, ಕಾಯ್ದೆಗೆ ತಡೆ ನೀಡಲು ನಿರಾಕರಿಸಿದೆ.

ADVERTISEMENT

ಮೇಲ್ಜಾತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವುದಕ್ಕೆ ಲೋಕಸಭೆ ಚುನಾವಣೆಗೆ ಕೆಲವೇ ವಾರಗಳಿರುವಾಗ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ. ಅದಕ್ಕಾಗಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ್ದವು.

ಜನಹಿತ ಅಭಿಯಾನ ಮತ್ತು ಯೂಥ್ ಫಾರ್ ಇಕ್ವಾಲಿಟಿಯಂತಹ ಸಂಘಟನೆಗಳು ತಿದ್ದುಪಡಿ ಮಸೂದೆಯ ವಿರುದ್ಧ ದೂರು ಸಲ್ಲಿಸಿವೆ.

ಆರ್ಥಿಕ ಹಿಂದುಳಿದಿರುವಿಕೆಯೇ ಮೀಸಲಾತಿಗೆ ಏಕೈಕ ಮಾನದಂಡ ಆಗಲಾರದು ಮತ್ತು ಸುಪ್ರೀಂ ಕೋರ್ಟ್‌ ನಿಗದಿಪಡಿಸಿದ ಶೇ 50ರ ಮಿತಿಯನ್ನು ಮೀಸಲಾತಿ ಮೀರಬಾರದು. ಆದರೆ, ಈ ಎರಡನ್ನೂ ಮೀರಿ ಮೇಲ್ಜಾತಿಗಳಿಗೆ ಮೀಸಲು ಕಲ್ಪಿಸಲಾಗಿದೆ ಎಂದು ಈ ಅರ್ಜಿಗಳಲ್ಲಿ ವಾದಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.