ADVERTISEMENT

ನಗರೀಕರಣದಿಂದ ಸಿಡಿಲು ಬಡಿತ ಹೆಚ್ಚು

ಪಿಟಿಐ
Published 12 ಆಗಸ್ಟ್ 2018, 19:30 IST
Last Updated 12 ಆಗಸ್ಟ್ 2018, 19:30 IST

ಕೋಲ್ಕತ್ತ: ಯೋಜನಾರಹಿತ ನಗರೀಕರಣ ಮತ್ತು ಮರಗಳ ನಾಶದಿಂದಾಗಿ ದೇಶದಲ್ಲಿ ಸಿಡಿಲು ಬಡಿತ ಹೆಚ್ಚಿದ್ದು, ಪರಿಣಾಮವಾಗಿ ಸಾವು–ನೋವಿನ ಸಂಖ್ಯೆಯೂ ಹೆಚ್ಚಾಗಿದೆ ಎಂದು ಪುಣೆಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟ್ರಾಪಿಕಲ್‌ ಮಿಟಿಯೊರಾಲಜಿಯ (ಐಐಟಿಎಂ) ಹಿರಿಯ ಹವಾಮಾನ ತಜ್ಞ ಡಾ. ಎಸ್‌.ಡಿ.ಪವಾರ್‌ ತಿಳಿಸಿದ್ದಾರೆ.

ಈಚಿನ ದಿನಗಳಲ್ಲಿ ಭಾರತದ ಗ್ರಾಮೀಣ ಪ್ರದೇಶಕ್ಕಿಂತಲೂ, ನಗರ ಪ್ರದೇಶದಲ್ಲಿ ಸಿಡಿಲು ಬಡಿತ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಸಿಡಿಲು ಬಡಿತದಿಂದಾಗಿ ಪ್ರತಿವರ್ಷ ಸುಮಾರು 3,500 ಸಾವುಗಳು ಸಂಭವಿಸುತ್ತಿವೆ. ಆದರೆ, ಕಳೆದ ಐದು ವರ್ಷಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಿದೆ. ಈ ಬಾರಿ ಮಧ್ಯ ಹಿಮಾಲಯದ ತಪ್ಪಲು ಮತ್ತು ದೇಶದ ಪೂರ್ವ ಭಾಗದಲ್ಲಿ ಸಿಡಿಲಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಭಾರತದಲ್ಲಿ ಸಿಡಿಲು ಬಡಿತದಿಂದ ಮೃತಪಟ್ಟವರ ಸಂಖ್ಯೆಯ ಬಗ್ಗೆ ಅಧಿಕೃತ ದಾಖಲೆಗಳಿಲ್ಲ. ಆದರೆ, ಕಳೆದ ಇಪ್ಪತ್ತು ವರ್ಷಗಳ ಅಧ್ಯಯನದ ಪ್ರಕಾರ, ಸಾವು–ನೋವಿನ ಸಂಖ್ಯೆ ಖಂಡಿತವಾಗಿಯೂ ಹೆಚ್ಚಿದೆ ಎಂದು ಹೇಳಿದ್ದಾರೆ.

ಜಾಗತಿಕ ತಾಪಮಾನ ಹೆಚ್ಚಳ, ಪರಿಸರ ಮಾಲಿನ್ಯ, ಬಯಲು ಪ್ರದೇಶಗಳಲ್ಲಿ ರಸ್ತೆಯಂತಹ ಮೂಲ ಸೌಕರ್ಯಗಳ ನಿರ್ಮಾಣ, ಹಸಿರಿನ ಕೊರತೆ ಇದಕ್ಕೆ ಕಾರಣ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.