ನವದೆಹಲಿ: ‘ದೇಶದಲ್ಲಿ ಯೂರಿಯಾ ಕೊರತೆ ಇಲ್ಲ’ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.
‘ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿ, ಲಾಭ ಪಡೆಯಲಿಕ್ಕಾಗಿ ಅನಗತ್ಯ ಕೊರತೆಯನ್ನು ಸೃಷ್ಟಿಸುವವರ ವಿರುದ್ಧ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು’ ಎಂದಿದೆ.
ಉತ್ತರ ಪ್ರದೇಶದ ಧೌರಾಹ್ರಾದಲ್ಲಿ ಯೂರಿಯಾ ಕೊರತೆ ಇದೆ ಎಂದು ಲೋಕಸಭೆಯಲ್ಲಿ ಸಮಾಜವಾದಿ ಪಕ್ಷದ ಸಂಸದ ಆನಂದ್ ಭದೌರಿಯಾ ಅವರು ಪ್ರಸ್ತಾಪಿಸಿದ್ದಕ್ಕೆ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಜೆ.ಪಿ. ನಡ್ಡಾ ಈ ಪ್ರತಿಕ್ರಿಯೆ ನೀಡಿದರು.
‘ಯೂರಿಯಾದ ಕೊರತೆ ಎಂದಿಗೂ ಇರಲಿಲ್ಲ. ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರಲು ಉತ್ಸುಕರಾಗಿರುವ ಕೆಲವರು ಕೊರತೆ ಸೃಷ್ಟಿಸುತ್ತಿದ್ದಾರೆ’ ಎಂದು ಸದನಕ್ಕೆ ತಿಳಿಸಿದರು.
‘ಯೂರಿಯಾ ತುಂಬಿದ ಸರಕು ಸಾಗಣೆಯ ರೈಲುಗಳು, ನಿಗದಿತ ದಿನದಂದೇ ನಿರ್ದಿಷ್ಟ ಸ್ಥಳ ತಲುಪುತ್ತಿವೆ. ಇದಕ್ಕೆ ಸಂಬಂಧಿಸಿದ ವಿವರಗಳು ಸಚಿವಾಲಯದಲ್ಲಿ ಲಭ್ಯವಿವೆ’ ಎಂದ ನಡ್ಡಾ, ‘ಕೃಷಿ ಸಚಿವಾಲಯದೊಂದಿಗೆ ಸಮಾಲೋಚಿಸಿಯೇ ರಸಗೊಬ್ಬರ ಪೂರೈಸಲು ನಿರ್ಧರಿಸಲಾಗಿದೆ’ ಎಂದರು.
ಸಮಯಕ್ಕೆ ಸರಿಯಾಗಿ ರೈತರಿಗೆ ಡಿಎಪಿ ಪೂರೈಸುವುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿಯೇ ದಿನಾಂಕ ಮತ್ತು ವಾರವಾರು ಕಾರ್ಯತಂತ್ರ ರೂಪಿಸಲಾಗಿದೆ ಎಂದು ಹೇಳಿದರು.
45 ಕೆ.ಜಿ. ತೂಕದ ಯೂರಿಯಾ ಚೀಲವನ್ನು ಗರಿಷ್ಠ ಚಿಲ್ಲರೆ ಬೆಲೆ ₹266 ಹಾಗೂ 50 ಕೆ.ಜಿ. ತೂಕದ ಡಿಎಪಿ ಚೀಲವನ್ನು ₹1,350ರ ದರದಲ್ಲಿ ರೈತರಿಗೆ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ಪ್ರತಿ ಚೀಲಕ್ಕೆ ₹1,600 ಸಬ್ಸಿಡಿ ನೀಡುತ್ತಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.