ADVERTISEMENT

Elections 2022 | ದಿಗಿಲು, ಮೌನ, ಶೂನ್ಯ: ಅಖಿಲೇಶ್ ವ್ಯಾಖ್ಯಾನ

ರಾಯ್‌ಬರೇಲಿ, ಫತೇಪುರದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2022, 19:45 IST
Last Updated 15 ಫೆಬ್ರುವರಿ 2022, 19:45 IST
ಕಾನ್ಪುರದ ಸರಸೌಲ್ ಎಂಬಲ್ಲಿ ಮಂಗಳವಾರ ನಡೆದ ಚುನಾವಣಾ ರ‍್ಯಾಲಿಗೆ ಬಂದ ಅಖಿಲೇಶ್ ಅವರನ್ನು ಕಾರ್ಯಕರ್ತರು ಹೂಗುಚ್ಛ ನೀಡಿ ಸ್ವಾಗತಿಸಿದರು–ಪಿಟಿಐ ಚಿತ್ರ
ಕಾನ್ಪುರದ ಸರಸೌಲ್ ಎಂಬಲ್ಲಿ ಮಂಗಳವಾರ ನಡೆದ ಚುನಾವಣಾ ರ‍್ಯಾಲಿಗೆ ಬಂದ ಅಖಿಲೇಶ್ ಅವರನ್ನು ಕಾರ್ಯಕರ್ತರು ಹೂಗುಚ್ಛ ನೀಡಿ ಸ್ವಾಗತಿಸಿದರು–ಪಿಟಿಐ ಚಿತ್ರ   

ರಾಯಬರೇಲಿ/ಲಖನೌ: ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಗೆ ಪ್ರಮುಖ ಸವಾಲು ಒಡ್ಡುತ್ತಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಹೊಸ ಘೋಷಣೆ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಎರಡು ಹಂತಗಳ ಮತದಾನ ನಡೆದಿದ್ದು, ಉಳಿದ ಹಂತಗಳಲ್ಲಿ ಬಿಜೆಪಿ ಪರಿಸ್ಥಿತಿ ಹೇಗಿದೆ ಎಂದು ಅವರು ವಿವರಿಸಿದ್ದಾರೆ. ಸನ್, ಸುನ್, ಶೂನ್ಯ ಎಂಬ ಮೂರು ‘ಎಸ್‌’ಗಳನ್ನು ಅವರು ಉದಾಹರಿಸಿದ್ದಾರೆ. ‘ಮೊದಲ ಹಂತದ ಚುನಾವಣೆ ಬಳಿಕ ಬಿಜೆಪಿ ದಿಗಿಲುಗೊಂಡಿತು (ಸನ್‌). ಎರಡನೇ ಹಂತದ ಚುನಾವಣೆ ಬಳಿಕ ಪಕ್ಷ ಮೌನವಾಗಿದೆ (ಸುನ್‌). ಮೂರನೇ ಹಂತದ ಬಳಿಕ ಪ‍ಕ್ಷವು ಶೂನ್ಯಕ್ಕೆ ಕುಸಿಯಲಿದೆ’ ಎಂದು ಅವರು ವಿವರಣೆ ನೀಡಿದ್ದಾರೆ.

ಉತ್ತರ ಪ್ರದೇಶದ ಫತೇಪುರ ಹಾಗೂ ರಾಯಬರೇಲಿಯಲ್ಲಿ ನಡೆದ ಚುನಾವಣಾ ರ್‍ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದಅವರು, ಮೂರನೇ ಹಂತದ ಚುನಾವಣೆಯಲ್ಲಿ ಬಿಜೆಪಿಗೆ ಖಾತೆ ತೆರೆಯಲೂ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಬುಂದೇಲ್‌ಖಂಡ ವ್ಯಾಪ್ತಿಯ 16 ಜಿಲ್ಲೆಗಳಲ್ಲಿ ಫೆ.20ರಂದು ಮೂರನೇ ಹಂತದ ಮತದಾನ ನಿಗದಿಯಾಗಿದೆ.

ADVERTISEMENT

ಬಡವರಿಗೆ ಐದು ವರ್ಷ ಉಚಿತ ದಿನಸಿ:
ಒಂದು ಕೆ.ಜಿ ತುಪ್ಪ ಒಳಗೊಂಡಂತೆ ಬಡವರಿಗೆ ಐದು ವರ್ಷಗಳ ಕಾಲ ಉಚಿತ ದಿನಸಿ ಪದಾರ್ಥ ನೀಡುವುದಾಗಿ ಅಖಿಲೇಶ್ ಯಾದವ್ ಅವರು ಮಂಗಳವಾರ ಭರವಸೆ ನೀಡಿದ್ದಾರೆ.

‘ಬಿಜೆಪಿ ಸರ್ಕಾರವು ಈ ಚುನಾವಣೆ ಮುಗಿಯುವವರೆಗೆ ಮಾತ್ರದಿನಸಿ ಪದಾರ್ಥಗಳನ್ನು ನೀಡಲಿದೆ. ಚುನಾವಣೆ ನಂತರ ದಿನಸಿ ಸಿಗುವುದಿಲ್ಲ. ನವೆಂಬರ್‌ನಲ್ಲೇ ದಿನಸಿ ಕಾರ್ಯಕ್ರಮ ಕೊನೆಗೊಂಡಿತ್ತು. ಆದರೆ ಚುನಾವಣೆ ಘೋಷಣೆಯಾಗಿದ್ದರಿಂದ ಕಾರ್ಯಕ್ರಮವನ್ನು ಮಾರ್ಚ್‌ವರೆಗೆ ವಿಸ್ತರಿಸಲಾಯಿತು’ ಎಂದು
ಹೇಳಿದ್ದಾರೆ.

‘ರಾಜ್ಯದಲ್ಲಿ ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ ದಿನಸಿ ಪೂರೈಸಲಾಗುತ್ತಿತ್ತು. ಪಕ್ಷ ಅಧಿಕಾರದಲ್ಲಿದ್ದ ಎಲ್ಲ ಅವಧಿಯಲ್ಲೂ ಈ ಕಾರ್ಯಕ್ರಮ ಇತ್ತು. ಈ ಬಾರಿ ಪಕ್ಷ ಅಧಿಕಾರಕ್ಕೆ ಬಂದರೆ, ದಿನಸಿಯ ಭಾಗವಾಗಿ ಸಾಸಿವೆ ಎಣ್ಣೆ, ಎರಡು ಎಲ್‌ಪಿಜಿಸಿಲಿಂಡರ್ ನೀಡಲು ಉದ್ದೇಶಿಸಲಾಗಿದೆ. ಬಡಜನರ ಆರೋಗ್ಯ ಉತ್ತಮಪಡಿಸುವ ಉದ್ದೇಶದಿಂದ ದಿನಸಿಯ ಜೊತೆಗೆ ಒಂದು ಕಿಲೋ ತುಪ್ಪ ನೀಡಲಾಗುವುದು’ ಎಂದು ಅಖಿಲೇಶ್ ಭರವಸೆ ನೀಡಿದ್ದಾರೆ.

ಬಿಜೆಪಿ ಸರ್ಕಾರ ನೀಡುತ್ತಿರುವ ದಿನಸಿಯಲ್ಲಿ ಗುಣಮಟ್ಟದ ಕೊರೆತೆಯಿದೆ ಎಂದು ಅವರೂ ದೂರಿದ್ದಾರೆ. ಉಪ್ಪಿನಲ್ಲಿ ಗಾಜಿನ ಚೂರುಗಳು ಸಿಕ್ಕಿರುವ ಬಗ್ಗೆ ವರದಿಗಳಿವೆ ಎಂದಿರುವ ಅವರು, ಗುಜರಾತ್‌ನಿಂದ ಉಪ್ಪು ಬರುತ್ತಿಲ್ಲವೇ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಖಾಲಿಯಿರುವ 11 ಲಕ್ಷ ಹುದ್ದೆಗಳಿಗೆ ನೇಮಕಾತಿ ನಡೆಸಿ, ಯುವಜನರಿಗೆ ಉದ್ಯೋಗ ನೀಡುವುದಾಗಿ ಅವರು ಭರವಸೆ ನೀಡಿದರು. ‘ಬಿಜೆಪಿ ಮುಖಂಡರು ಮನೆಮನೆ ಪ್ರಚಾರಕ್ಕೆ ಹೋಗಿದ್ದಾಗ ಕೆಲವು ಗ್ರಾಮಗಳಲ್ಲಿ ಜನರು ಖಾಲಿ ಸಿಲಿಂಡರ್‌ಗಳನ್ನು ತೋರಿಸಿದರು. ಹೀಗಾಗಿ ಮುಖಂಡರ ಮನೆಮನೆ ಪ್ರಚಾರ ನಿಂತುಹೋಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.